BANTWAL
ಬಂಟ್ವಾಳದಲ್ಲಿ ಹಂದಿ ಜ್ವರ್ ಎಚ್ 1ಎನ್ 1 ಗೆ ಮಹಿಳೆ ಸಾವು

ಬಂಟ್ವಾಳದಲ್ಲಿ ಹಂದಿ ಜ್ವರ್ ಎಚ್ 1ಎನ್ 1 ಗೆ ಮಹಿಳೆ ಸಾವು
ಬಂಟ್ವಾಳ ಅಕ್ಟೋಬರ್ 16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಂದಿ ಜ್ವರ ಎಚ್ 1 ಎನ್ 1 ಮಹಾಮಾರಿ ಕಾಣಿಸಿಕೊಂಡಿದೆ. ಎಚ್1ಎನ್1 ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಜಿಪನಡು ನಿವಾಸಿ ಮಹಿಳೆಯೊಬ್ಬರು ಇಂದು ಮೃತಪಟ್ಟಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಎಚ್ 1 ಎನ್ 1 ಸೊಂಕಿನ ಬಗ್ಗೆ ಆತಂಕ ಸೃಷ್ಠಿಯಾಗಿದೆ.
ಈಗಾಗಲೇ ರಾಜಸ್ಥಾನದಲ್ಲಿ ಎಚ್ 1 ಎನ್ 1 ಪ್ರಕರಣಗಳು ವರದಿಯಾಗುತ್ತಿದ್ದಂತೆ ಕರ್ನಾಟಕದಲ್ಲೂ ಈಗ ಹಂದಿಜ್ವರದ ಲಕ್ಷಣಗಳು ಕಾಣಿಸತೊಡಗಿದೆ.

ಎಚ್1ಎನ್1 ಬಾಧಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತಾಲೂಕಿನ ಸಜಿಪನಡು ನಿವಾಸಿ ದಿವಂಗತ ಮಯ್ಯದ್ದಿ ಅವರ ಪುತ್ರಿ ಝಬೀನಾ (22) ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಝಬೀನಾ ಅವರ ತಾಯಿ ಅವ್ವಮ್ಮ(44) ಅಕ್ಟೋಬರ್ 10ರಂದು ಎಚ್1ಎನ್1 ಬಾಧಿತರಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು.
ಅವ್ವಮ್ಮ ಎಚ್1ಎನ್1 ಬಾಧಿತರಾಗಿ ಮೃತಪಟ್ಟಿರುವುದಾಗಿ ಈಗಾಗಲೇ ದೃಢಪಡಿಸಿರುವ ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು, ಅವರ ಮಗಳು ಝುಬೀನಾ ಕೂಡಾ ಎಚ್1ಎನ್1 ಬಾಧಿತರಾಗಿದ್ದರೆಂದು ಬಗ್ಗೆ ಮಾಹಿತಿ ನೀಡಿದ್ದಾರೆ. ಸಜಿಪನಡು ಗ್ರಾಮದ ಜ್ವರಪೀಡಿತ ಇನ್ನೋರ್ವ ವ್ಯಕ್ತಿ ಕೂಡಾ ಎಚ್1ಎನ್1 ಶಂಕಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ ಎಂದು ಡಾ.ದೀಪಾ ಪ್ರಭು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಈಗಾಗಲೇ 400 ಕ್ಕೂ ಅಧಿಕ ಮಂದಿಗೆ ಎಚ್ 1 ಎನ್ 1 ಸೊಂಕು ತಗುಲಿದ್ದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಹಂದಿಜ್ವರ ದ ಪ್ರಕರಣಗಳು ದಾಖಲಾಗುತ್ತಿರುವುದು ಆತಂಕಕಾರಿಯಾಗಿದೆ.