LATEST NEWS
ಅನ್ಲಾಕ್ 3.0 ಮಾರ್ಗಸೂಚಿ ಪ್ರಕಟ – ತೆರೆಯಲಿವೆ ಜಿಮ್; ರಾತ್ರಿ ಸಂಚಾರಕ್ಕೆ ಮುಕ್ತ

ನವದೆಹಲಿ: ದೇಶದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆ ಕೇಂದ್ರ ಸರಕಾರ ಅನ್ ಲಾಕ್ 3.0 ಮಾರ್ಗಸೂಚಿ ಪ್ರಕಟ ಮಾಡಿದ್ದು, ಅಗಸ್ಟ್ 1ರಿಂದ ಅನ್ಲಾಕ್ 3.0 ನಿಯಮಗಳು ಜಾರಿಯಾಗಲಿದೆ.
ರಾತ್ರಿ ವೇಳೆ ಜನರ ಸಂಚಾರಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಲಾಗಿದೆ.2020ರ ಆಗಸ್ಟ್ 5 ರಿಂದ ಯೋಗ ಕೇಂದ್ರಗಳು ಹಾಗೂ ಜಿಮ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಸಂಚಾರಕ್ಕೆ ವಿಧಿಸಲಾಗಿದ್ದ ಕರ್ಫ್ಯೂ ತೆರವುಗೊಳಿಸಲಾಗಿದೆ.
ಆಗಸ್ಟ್ 15ರಂದು ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಬಹುದಾಗಿದ್ದು, ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮಾಸ್ಕ್ ಧರಿಸುವುದು ಸೇರಿದಂತೆ ಆರೋಗ್ಯ ಸಂಬಂಧಿಸಿದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.

ಕಂಟೈನ್ಮೆಂಟ್ ಝೋನ್ ಹೊರತಾದ ಪ್ರದೇಶದಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ ಸಾಮಾಜಿಕ ರಾಜಕೀಯ, ಶೈಕ್ಷಣಿಕ ಧಾರ್ಮಿಕ, ಕ್ರೀಡಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಕಂಟೈನ್ಮೆಂಟ್ ಪ್ರದೇಶದಲ್ಲಿ ಅಗಸ್ಟ್ 31ರ ವರೆಗೂ ಲಾಕ್‍ಡೌನ್ ಮುಂದುವರಿಯಲಿದ್ದು, ಮೂಲಭೂತ ಅವಶ್ಯಕ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. 65 ವರ್ಷ ಮೆಲ್ಪಟ್ಟ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳು ಮನೆಯಲ್ಲಿ ಇರಬೇಕು. ಅವಶ್ಯಕ ಕೆಲಸಗಳಿಗೆ ಮಾತ್ರ ಹೊರಹೋಗಬೇಕು.
ಇನ್ನು ವಂದೇ ಭಾರತ್ ಮಿಷನ್ ಅಡಿ ಸೀಮಿತ ಅಂತರಾಷ್ಟ್ರೀಯ ವಿಮಾನ ಹಾರಾಟಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಎಲ್ಲರೂ ಈ ಹಿಂದೆ ತಿಳಿಸಂತೆ ಕೊರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅಲ್ಲದೆ ಆರೋಗ್ಯ ಸೇತು ಬಳಕೆ ಮುಂದುವರಿಸುವಂತೆ ತಿಳಿಸಲಾಗಿದೆ