Connect with us

LATEST NEWS

ಪ್ರಿಯಕರನ ಕೊಂದ ಕೊಲೆಗಾತಿಗೆ ಮರಣದಂಡನೆ ಶಿಕ್ಷೆ ನೀಡಿದ ಕೋರ್ಟ್ -24 ವರ್ಷಕ್ಕೆ ಗಲ್ಲು ಶಿಕ್ಷೆಗೆ ಗುರಿಯಾದ ಗ್ರೀಷ್ಮಾ

ತಿರುವನಂತಪುರಂ ಜನವರಿ 20: ತನ್ನ ಪ್ರಿಯಕರನಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿ ಆತನನ್ನು ಅತೀ ಕ್ರೂರವಾಗಿ ಕೊಲೆ ಮಾಡಿದ ಕೊಲೆಗಾತಿ ಗ್ರೀಷ್ಮಾಗೆ ನೆಯ್ಯಟ್ಟಿಂಕರಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.


2022 ರಲ್ಲಿ ತನ್ನ ಬಾಯ್ ಫ್ರೆಂಡ್ ಶರೋನ್ ರಾಜ್‌ಗೆ ಮಾರಕ ಕಳೆನಾಶಕ ಬೆರೆಸಿದ ಆಯುರ್ವೇದ ಮಿಶ್ರಣವನ್ನು ಕುಡಿಸಿ ಕೊಲೆ ಮಾಡಿದ್ದಳು. ನ್ಯಾಯಮೂರ್ತಿ ಎ ಎಂ ಬಶೀರ್ ಅವರು ವಾದ ವಿವಾದ ಆಲಿಸಿದ ನಂತರ ತೀರ್ಪು ನೀಡಿ, ಇದು ಅಪರೂಪದ ಪ್ರಕರಣ, ಸರಿಯಾಗಿ ಪೂರ್ವನಿಯೋಜಿತವಾಗಿ ನಡೆಸಿದ ಅಪರಾಧ ಕೃತ್ಯವಾಗಿದೆ ಎಂದು ತೀರ್ಮಾನಿಸಿದರು. ಆರೋಪಿಯು ಆಕೆಯ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಯ ಕಾರಣದಿಂದಾಗಿ ಯಾವುದೇ ವಿನಾಯ್ತಿಗೆ ಅರ್ಹಳಲ್ಲ ಎಂದು ತೀರ್ಪು ನೀಡಿದರು. ಮಹಿಳೆಯ ಕೃತ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದು ಆರೋಪಿ ಪ್ರೀತಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿದ್ದಾಳೆ ಎಂದು ಕಂಡುಬರುತ್ತಿದೆ ಎಂದರು. ತೀರ್ಪು ಕೇಳಲು ಶರೋನ್ ಪೋಷಕರನ್ನು ನ್ಯಾಯಾಲಯವು ಕರೆಸಿಕೊಂಡಿತ್ತು. ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಕಣ್ಣೀರು ಸುರಿಸಿದರು.

24 ವರ್ಷದ ಗ್ರೀಷ್ಮಾ ಗಲ್ಲು ಶಿಕ್ಷೆಗೆ ಗುರಿಯಾದ ಕೇರಳದ ಅತ್ಯಂತ ಕಿರಿಯ ಮಹಿಳೆ . ಗಲ್ಲು ಶಿಕ್ಷೆಗೆ ಗುರಿಯಾದ ರಾಜ್ಯದ ಎರಡನೇ ಮಹಿಳೆ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. 2024ರ ವಿಝಿಂಜಂ ಶಾಂತಕುಮಾರಿ ಹತ್ಯೆ ಪ್ರಕರಣದಲ್ಲಿ ರಫೀಕಾ ಬೀವಿ ಶಿಕ್ಷೆಗೆ ಗುರಿಯಾದ ಮೊದಲ ಮಹಿಳೆ . ಎರಡೂ ತೀರ್ಪುಗಳನ್ನು ನೆಯ್ಯಟ್ಟಿಂಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎ.ಎಂ.ಬಶೀರ್ ಅವರು ಪ್ರಕಟಿಸಿದರು.

ಗ್ರೀಷ್ಮಾ ಅವರು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಖಾಸಗಿ ಕಾಲೇಜಿನಲ್ಲಿ ಸಾಹಿತ್ಯ ಅಧ್ಯಯನ ಮಾಡಿದ್ದಾರೆ. ತಿರುವನಂತಪುರಂ ಜಿಲ್ಲೆಯ ಪರಸ್ಸಾಲ ಮೂಲದ ಶರೋನ್ ರಾಜ್ ಅದೇ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ರೇಡಿಯಾಲಜಿ ವಿದ್ಯಾರ್ಥಿಯಾಗಿದ್ದರು. ಗ್ರಿಷ್ಮಾ ಮತ್ತು ಶೆರೋನ್ ರಾಜ್ ಇಬ್ಬರು ಪ್ರೀತಿಸುತ್ತಿದ್ದರು, ಶರೋನ್ ಮತ್ತು ಗ್ರೀಷ್ಮಾ ಮಧ್ಯೆ 2021ರಲ್ಲಿ ಪ್ರೀತಿ ಚಿಗುರೊಡೆದಿತ್ತು. ಇಬ್ಬರು ಜೊತೆ ಜೊತೆಯಾಗಿ ತಿರುಗಾಡಿ ಪ್ರಣಯ ಪಕ್ಷಿಗಳಾಗಿದ್ದರು, ಈ ನಡುವೆ ಗ್ರಿಷ್ಮಾ ಮನೆಯವರು ಆಕೆಯ ಮದುವೆಯನ್ನು ಯೋಧರೊಬ್ಬರ ನಿಶ್ಚಯಿಸಿದ್ದರು, ಈ ಹಿನ್ನಲೆ ಗ್ರೀಷ್ಮಾ ಸೇನಾಧಿಕಾರಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ಶರೋನ್ ಜೊತೆಗಿನ ಸಂಬಂಧವನ್ನು ಮುರಿಯಲು ಬಯಸಿದ್ದರು. ತನ್ನೊಂದಿಗೆ ಸಂಬಂಧ ಮುರಿದುಕೊಳ್ಳುವಂತೆ ಶರೋನ್ ನನ್ನು ಒತ್ತಾಯಿಸಿದ್ದಳು. ಆದರೆ ಅದಕ್ಕೆ ಶರೋನ್ ಒಪ್ಪಿರಲಿಲ್ಲ. ಅಂತಿಮವಾಗಿ ಗ್ರೀಷ್ಮಾ ಶರೋನ್ ನಿಂದ ಅಂತರ ಕಾಯಲು ನಿರ್ಧರಿಸಿದ್ದಳು.


ಆದರೂ ಶರೋನ್ ಬಿಡದ ಹಿನ್ನಲೆ ಆತನ ಮಾತಿಗೆ ಕಟ್ಟು ಬಿದ್ದ ಗ್ರೀಷ್ಮಾ, 2022ರ ನವೆಂಬರ್ ತಿಂಗಳಲ್ಲಿ ಹತ್ತಿರದ ಚರ್ಚ್‌ನಲ್ಲಿ ಶರೋನ್ ರಾಜ್ ಜೊತೆ ಕ್ರಿಶ್ಚಿಯನ್ ಧರ್ಮದ ಪ್ರಕಾರ ವಿವಾಹ ಮಾಡಿಕೊಂಡಿದ್ದಳು. ಬಳಿಕ ಗ್ರಿಷ್ಮಾ ಶೆರೋನ್ ನನ್ನು ಹೇಗಾದರೂ ಮಾಡಿ ಮುಗಿಸಲೇಬೇಕು ಎಂದು ತೀರ್ಮಾನಿಸಿದ್ದಳು, ಅದರಂತೆ ಗ್ರಿಷ್ಮಾ ಶೆರೋನ್ ನನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಳು, ಆಗಸ್ಟ್ 2022 ರಲ್ಲಿ ‘ಜ್ಯೂಸ್ ಚಾಲೆಂಜ್’ ಎಂಬ ಆಟವಾಡುವ ನೆಪದಲ್ಲಿ ಶರೋನ್ ನನ್ನು ಕೊಲ್ಲಲು ಪ್ರಯತ್ನಿಸಿದಳು, ಹಣ್ಣಿನ ಜ್ಯೂಸ್ ಗೆ 50 ಪ್ಯಾರಸಿಟಮಾಲ್ ಮಾತ್ರೆಗಳನ್ನು ಬೆರೆಸಿ ಶರೋನ್‌ಗೆ ನೀಡಿದ್ದಳು. ಶರೋನ್ ಜ್ಯೂಸ್ ಕುಡಿದಾಗ ಕಹಿ ರುಚಿಯಿಂದಾಗಿ ಉಗುಳಿದನು. ಆಗ ನಡೆಸಿದ್ದ ಸಂಚು ಫಲ ಕೊಟ್ಟಿರಲಿಲ್ಲ. ಹೀಗಾಗಿ ಅಂದು ಬಚಾವ್ ಆಗಿದ್ದ.

ಅದಾಗಿ ಎರಡು ತಿಂಗಳ ನಂತರ, ಅಕ್ಟೋಬರ್‌ 2022ರಲ್ಲಿ ಗ್ರೀಷ್ಮಾ ಶರೋನ್ ನನ್ನು ತನ್ನ ನಿವಾಸಕ್ಕೆ ಕರೆದೊಯ್ದು ವಿಷಕಾರಿ ಕಷಾಯವನ್ನು ಕುಡಿಯಲು ಕೊಟ್ಟಳು. ಶರೋನ್ ಅದನ್ನು ಸೇವಿಸಿದ ತಕ್ಷಣ ವಾಂತಿ ಮಾಡಲಾರಂಭಿಸಿದ್ದನು. ಈ ವೇಳೆ ಆತನ ಸ್ನೇಹಿತರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದರು, ವಿಷದ ಪ್ರಮಾಣ ಜಾಸ್ತಿಯಾಗಿದ್ದರಿಂದ ಆಸ್ಪತ್ರೆ ಸೇರಿ 13 ದಿನಗಳ ನಂತರ ಬಹು ಅಂಗಾಂಗ ವೈಫಲ್ಯದಿಂದ ಶರೋನ್ ರಾಜ್ ಸಾವನ್ನಪ್ಪಿದ್ದ. ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್​ನಲ್ಲಿದ್ದ ಶರೋನ್ ರಾಜ್, ಗ್ರೀಷ್ಮಾ ಬಗ್ಗೆ ಹೇಳಿದ್ದ. ಆಕೆಯೇ ನನಗೆ ವಿಷ ಹಾಕಿದ್ದಾಳೆ ಅಂತ ಸಂಬಂಧಿಕರು, ಕುಟುಂಬಸ್ಥರ ಮುಂದೆ ಹೇಳಿಕೆ ನೀಡಿದ್ದ.
ಇದೀಗ ನ್ಯಾಯಾಲಯ ಕೊಲೆ ಪಾತಕಿ ಗ್ರಿಷ್ಮಾಳಿಗೆ ಮರಣದಂಡನೆ ವಿಧಿಸಿದೆ. ನ್ಯಾಯಾಲಯ ತನ್ನ ತೀರ್ಪಿನಲ್ಲಿ ಗ್ರೀಷ್ಮಾ ತನ್ನನ್ನು ಪ್ರೀತಿಸಿದ ವ್ಯಕ್ತಿಗೆ ಮೋಸ ಮಾಡಿದ್ದಾಳೆ. ಇದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನಿಸುವುದಿಲ್ಲ. ಶರೋನ್ ತನ್ನ ಜೀವನದ ಕೊನೆಯ ಅವಧಿಯಲ್ಲೂ ಗ್ರೀಷ್ಮಾಳನ್ನು ಪ್ರೀತಿಸುತ್ತಲೇ ಇದ್ದ ಮತ್ತು ಆಕೆಗೆ ಶಿಕ್ಷೆ ಆಗಬಾರದು ಎಂದು ಬಯಸಿದ್ದ’ ಎಂದು ನ್ಯಾಯಾಲಯ ತನ್ನ 586 ಪುಟಗಳ ತೀರ್ಪಿನಲ್ಲಿ ಹೇಳಿದೆ. ಗ್ರೀಷ್ಮಾ ವಿರುದ್ಧ 48 ಸಾಂದರ್ಭಿಕ ಸಾಕ್ಷ್ಯಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ. ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸಲು ಯಾವುದೇ ಅಡೆತಡೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ ಕೊಲೆ ಪ್ರಕರಣವನ್ನು ಪೊಲೀಸರು ಅತ್ಯಂತ ಬುದ್ಧಿವಂತಿಕೆಯಿಂದ ತನಿಖೆ ನಡೆಸಿದ್ದಾರೆ ಎಂದು ಶ್ಲಾಘಿಸಿತು.


ಸಾಕ್ಷ್ಯ ನಾಶ ಮಾಡಿದ ಆರೋಪದ ಮೇಲೆ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಗ್ರೀಷ್ಮಾಳ ತಾಯಿ ಸಿಂಧು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಈ ಹಿಂದೆ ಬಿಡುಗಡೆ ಮಾಡಲಾಗಿತ್ತು.

ಪ್ರಮುಖ ಆರೋಪಿ ಗ್ರೀಷ್ಮಾಳಿಗೆ ಮರಣದಂಡನೆ ಪ್ರಕಟವಾಗುತ್ತಿದ್ದಂತೆ ಮೃತ ಶರೋನ್ ರಾಜ್ ತಾಯಿ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಮಗನಿಗೆ ಸಿಗಬೇಕಾದ ನ್ಯಾಯ ಸಿಕ್ಕಿದೆ. ನ್ಯಾಯಾಲಯಕ್ಕೆ ಕೃತಜ್ಞತೆ’ ಎಂದು ಹೇಳಿದರು.
24 ವರ್ಷದ ಗ್ರೀಷ್ಮಾ ಗಲ್ಲು ಶಿಕ್ಷೆಗೆ ಗುರಿಯಾದ ಕೇರಳದ ಅತ್ಯಂತ ಕಿರಿಯ ಮಹಿಳೆ . ಗಲ್ಲು ಶಿಕ್ಷೆಗೆ ಗುರಿಯಾದ ರಾಜ್ಯದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ತನ್ನ ಜೀವವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದ ಪ್ರಿಯಕರನ್ನು ನಿರ್ಧಯವಾಗಿ ಈಕೆ ಕೊಲೆ ಮಾಡಿದ್ದಾಳೆ. ಎರಡು ಬಾರಿ ತನ್ನ ಪ್ರಿಯಕರನ್ನು ಕೊಲೆ ಮಾಡಲು ಯತ್ನಿಸಿದ್ದಳು, ಇವಳಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ. ಶಿಕ್ಷೆ ನೀಡಿದ ಜಡ್ಜ್… ಮಹಿಳೆಯ ಕೃತ್ಯವು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದು ಆರೋಪಿ ಪ್ರೀತಿಯ ಪಾವಿತ್ರ್ಯತೆಯನ್ನು ಉಲ್ಲಂಘಿಸಿದ್ದಾಳೆ ಎಂದು ಕಂಡುಬರುತ್ತಿದೆ ಎಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *