LATEST NEWS
ಶವಸಂಸ್ಕಾರಕ್ಕೆ ಸ್ಥಳ ನೀಡದ ಹಿನ್ನಲೆ ಗ್ರಾಮಪಂಚಾಯತ್ ಎದುರೇ ಚಟ್ಟ ನಿರ್ಮಿಸಿ ಪ್ರತಿಭಟನೆ
ಶವಸಂಸ್ಕಾರಕ್ಕೆ ಸ್ಥಳ ನೀಡದ ಹಿನ್ನಲೆ ಗ್ರಾಮಪಂಚಾಯತ್ ಎದುರೇ ಚಟ್ಟ ನಿರ್ಮಿಸಿ ಪ್ರತಿಭಟನೆ
ಉಡುಪಿ ಜನವರಿ 28: ಹೆಣ ಸುಡಲು ಸ್ಮಶಾನವಿಲ್ಲದ ಕಾರಣ ಸಂಕಷ್ಟಕ್ಕೀಡಾದ ದಲಿತರು ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಕಚೇರಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ ಹಲವು ವರ್ಷಗಳಿಂದ ಎರ್ಮಾಳ್ ಬಡ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಅಲ್ಲದೆ ಸ್ಮಶಾನದ ಪಕ್ಕದಲ್ಲೇ ಶಾಲೆ ಮತ್ತು ದೇವಾಲಯ ಇರುವ ಕಾರಣ ಸ್ಮಶಾನ ಬಳಸದಂತೆ ಒಂದು ವರ್ಗ ವಿರೋಧಿಸಿದ್ದು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿದೆ.
ಈ ಹಿನ್ನಲೆಯಲ್ಲಿ ಇಲ್ಲಿಯವರೆಗೆ ದಲಿತರು ಸಾರ್ವಜನಿಕ ಸ್ಮಶಾನವಿಲ್ಲದೇ ರೈಲ್ವೆ ಹಳಿ ಬದಿಯಲ್ಲಿ ಹೆಣ ಸುಡುತ್ತಿದ್ದರು. ನಿನ್ನೆ ಬಡಾ ಪಂಚಾಯತ್ ಮಾಜಿ ಸದಸ್ಯರಾಗಿದ್ದ ಶಂಕರ್ ಅವರು ನಿಧನರಾದ ಹಿನ್ನಲೆ ಶವ ಸಂಸ್ಕಾರಕ್ಕೆ ಸಶ್ಮಾನ ಇಲ್ಲದ ಕಾರಣ ದಸಂಸ ನೇತೃತ್ವದಲ್ಲಿ ಗ್ರಾಮಪಂಚಾಯತ್ ಕಚೇರಿ ಮುಂದೆ ಕಟ್ಟಿಗೆಗಳನ್ನು ಇರಿಸಿ ಹೆಣ ಸುಡಲು ಮುಂದಾಗಿದ್ದರು.
ಈ ಹಿನ್ನಲೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣವಾಗಿತ್ತು. ಶಾಸಕ ಲಾಲಾಜಿ ಮೆಂಡನ್ ವಿರುದ್ಧ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಜೈ ಶಂಕರ್, ಕಾಪು ತಹಶಿಲ್ದಾರ್, ಅಪರ ಜಿಲ್ಲಾಧಿಕಾರಿ ಆಗಮಿಸಿದರೂ ಮಾತಿಗೆ ಬಗ್ಗದೆ ಪ್ರತಿಭಟನಾಕಾರರು ತಮ್ಮ ಹೋರಾಟ ಮುಂದುವರೆಸಿದ್ದಾರೆ.