ಅತ್ತೂರು ಜಾತ್ರೆಯಲ್ಲಿ ಜನರೇಟರ್ ಬೆಂಕಿಗೆ ಕಾರಣವಾಯ್ತಾ ಕಲ್ಕುಡ್ಕ ದೈವದ ಮುನಿಸು…?

ಕಾರ್ಕಳ ಜನವರಿ 27: ಅತ್ತೂರು ಚರ್ಚ್ ಜಾತ್ರಾ ಸಂದರ್ಭದಲ್ಲಿ ಜನರೇಟರ್ ಒಂದು ಇದ್ದಕ್ಕಿದ್ದ ಹಾಗೆ ಬೆಂಕಿಗೆ ಆಹುತಿಯಾಗಿರುವ ಪ್ರಕರಣ ಈಗ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಈ ಘಟನೆಗೆ ಅತ್ತೂರು ಪರ್ಪಲೆ ಗುಡ್ಡೆಯಲ್ಲಿ ನೆಲೆಸಿರುವ ದೈವ ಶಕ್ತಿಯ ಮುನಿಸು ಕಾರಣ ಎಂಬ ಮಾತು ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಪ್ರಸಿದ್ದ ಅತ್ತೂರು ಜಾತ್ರಾ ಮಹೋತ್ಸವದ ಪ್ರಾರಂಭದ ದಿನವಾದ ನಿನ್ನೆ ರಾತ್ರಿ 9 ಗಂಟೆಗೆ ಚರ್ಚ್‌ನ ಮುಂಭಾಗದ ಗೋಪುರದ ಬಳಿ ದೀಪಾಲಾಂಕರಕ್ಕಾಗಿ ಕಾರ್ಯಚರಿಸುತ್ತಿದ್ದ ಜನರೇಟರ್ ಏಕಾಏಕಿ ಹೊತ್ತಿ ಉರಿದಿತ್ತು.

ಈ ಸಂದರ್ಭ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳೀಯರು, ಚರ್ಚ್‌ನ ಸ್ವಯಂ ಸೇವಕರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಬಳಿಯೇ ವ್ಯಾಪಾರಕ್ಕಾಗಿ ಹಾಕಿದ್ದ ನೂರಾರು ಅಂಗಡಿ ಮುಂಗಟ್ಟುಗಳು ಇದ್ದು, ಸಾರ್ವಜನಿಕರ, ಸ್ವಯಂ ಸೇವಕರ ಕಾರ್ಯಾಚರಣೆಯಿಂದ ಹೆಚ್ಚಿನ ಬೆಂಕಿ ಹರಡುವುದನ್ನು ತಡೆಯಲಾಯಿತು.

ಆದರೆ ಈ ಘಟನೆ ಈಗ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಈ ಘಟನೆಗೆ ಅತ್ತೂರು ಪರ್ಪಲೆ ಗುಡ್ಡೆಯಲ್ಲಿ ನೆಲೆಸಿರುವ ದೈವ ಶಕ್ತಿಯ ಮುನಿಸು ಕಾರಣ ಎಂಬ ಮಾತು ಗ್ರಾಮಸ್ಥರಿಂದ ವ್ಯಕ್ತವಾಗಿದೆ. ದೈವಗಳಿಗೆ ಪ್ರಾರ್ಥನೆ ಮಾಡದೆ ಅತ್ತೂರು ಜಾತ್ರೆಗೆ ಅತ್ತೂರು ಜಾತ್ರಾ ಸಮಿತಿಯು ಚಾಲನೆ ಕೊಟ್ಟಿದ್ದರ ಪರಿಣಾಮ, ಅತ್ತೂರ ದೈವಶಕ್ತಿ ಕಲ್ಕುಡ್ಕ ತನ್ನ ಕಾರಣೀಕದ ಶಕ್ತಿ ತೋರಿಸಿದೆ ಎನ್ನಲಾಗುತ್ತಿದೆ.

ಈ ಹಿಂದೆ ತನ್ನನ್ನು ಅಪಮಾನಿಸಿದ ಕಾರ್ಕಳ ಅರಸರ ಪೇಟೆಗೆ ಬೆಂಕಿ ಕೊಟ್ಟ ಕಲ್ಕುಡ ಇಂದು ತನ್ನನ್ನು ಅವಗಣಿಸಿದ ಅತ್ತೂರು ಚರ್ಚಿನವರಿಗೆ ಬುದ್ದಿ ಕಲಿಸಲು ದ್ವಾರದ ಬಳಿ ಇಟ್ಟ ಬ್ರಹತ್ ಜನರೇಟರಿಗೆ ಬೆಂಕಿಯಿಟ್ಟ ಎಂದು ಜನ ಮಾತನಾಡುತ್ತಿದ್ದಾರೆ.