LATEST NEWS
ಫೆಬ್ರವರಿ 14 ರಿಂದ ಜಿಪಿಎಲ್ 2020 ಉತ್ಸವ

ಫೆಬ್ರವರಿ 14 ರಿಂದ ಜಿಪಿಎಲ್ 2020 ಉತ್ಸವ
ಮಂಗಳೂರು ಫೆ.10: ಬಹುನಿರೀಕ್ಷಿತ ನಾಲ್ಕನೇ ವರ್ಷದ ಕೊಡಿಯಾಲ್ ಸ್ಪೋರ್ಟ್ ಎಸೋಸಿಯೇಶನ್ ಆಯೋಜಿತ ಫುಜ್ಲಾನಾ ಜಿಪಿಎಲ್ ಉತ್ಸವ ಇದೇ ಫೆಬ್ರವರಿ 14, 15 ಮತ್ತು 16 ರಂದು ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆದ್ದೂರಿಯಾಗಿ ನಡೆಯಲಿದೆ.
ಈ ಬಾರಿ ಕ್ರಿಕೆಟ್ ಪಂದ್ಯಾಟಗಳೊಂದಿಗೆ ವೈವಿದ್ಯಮಯ ವಿಶೇಷತೆಗಳು ಸೇರಿ ಹಲವಾರು ವಿಭಿನ್ನ ಕಾರ್ಯಾಗಾರಗಳು, ಸ್ಪರ್ಧೆಗಳು ನಡೆಯಲಿದ್ದು ವಿಶೇಷ ಆಕರ್ಷಣೆಯೊಂದಿಗೆ ಜಿಪಿಎಲ್ ಉತ್ಸವ 2020 ಮನಸೂರೆಗೊಳ್ಳಲಿದೆ. ಜಿಪಿಎಲ್ ಕ್ರಿಕೆಟ್ 2020 ಯಲ್ಲಿ ಮಂಗಳೂರು ಸೇರಿ ಕರಾವಳಿ ಜಿಲ್ಲೆಯನ್ನು ಒಳಗೊಂಡು ಅಂತರರಾಜ್ಯ ತಂಡಗಳು ಸೇರಿ ಒಟ್ಟು 16 ಟೀಮ್ ಗಳ 32 ಪಂದ್ಯಗಳು ಅರ್ಹನಿಶಿಯಾಗಿ ನಡೆಯಲಿವೆ.

ಮೊದಲ ಪಂದ್ಯ ಶುಕ್ರವಾರ ಫೆಬ್ರವರಿ 14 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ. ಫೈನಲ್ ಪಂದ್ಯ ಪೆಬ್ರವರಿ 16 ರ ಭಾನುವಾರ ರಾತ್ರಿ 9 ಗಂಟೆಗೆ ಆರಂಭವಾಗಲಿದೆ. ಪಂದ್ಯದ ಬಳಿಕ ವಿಜೇತ ತಂಡಕ್ಕೆ ಟ್ರೋಫಿ, ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಸರಣಿ ಶ್ರೇಷ್ಠ ಕ್ರೀಡಾಪಟುವಿಗೆ ಸುಜುಕಿ ಝೀಕ್ಸರ್ ಬೈಕ್ ಉಡುಗೊರೆಯಾಗಿ ನೀಡಲಾಗುವುದು. ಶುಕ್ರವಾರ ರಾತ್ರಿ 7 ಗಂಟೆಗೆ ಜಿಪಿಎಲ್ ಉತ್ಸವದ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಗಣ್ಯರು ಉಪಸ್ಥಿತರಿರುವರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಫ್ಯೂಶನ್ ಮ್ಯೂಸಿಕಲ್ ಬ್ಯಾಂಡ್ ವತಿಯಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ. ಶನಿವಾರ ರಾತ್ರಿ 7 ರಿಂದ 8 ಗಂಟೆಯ ತನಕ ಮಲ್ಲಕಂಬ ಪ್ರದರ್ಶನ ನಡೆಯಲಿದೆ. ರಾತ್ರಿ 8:30 ರಿಂದ ನೇತ್ರಾವತಿ ನದಿಯಲ್ಲಿ ಚಲಿಸುವ ವಿಹಾರ ನೌಕೆಯಲ್ಲಿ ಆಹ್ವಾನಿತ ಗಣ್ಯರೊಂದಿಗೆ ಪದ್ಮಶ್ರೀ ಟಿವಿ ಮೋಹನದಾಸ್ ಪೈ ಅವರು ಸಂವಾದ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.