LATEST NEWS
ಚೀನಾಕ್ಕೆ ಯೂಟೂಬ್ ಹೊಡೆತ ನೀಡಿದ ಅಮೇರಿಕಾ
ವಾಷಿಂಗ್ಟನ್ ಡಿಸಿ, ಅಗಸ್ಟ್ 07: ಅಮೇರಿಕಾ ಹಾಗೂ ಚೀನಾದ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿ ವರ್ಷಗಳೇ ಕಳೆದಿದೆ. ಇದೀಗ ಈ ಗುದ್ದಾಟ ಬಹಿರಂಗಗೊಳ್ಳಲಾರಂಭಿಸಿದೆ. ವಿಶ್ವವನ್ನು ಕಾಡಿದ ಕೊರೊನಾ ಮಹಾಮಾರಿಯ ವಿಚಾರದಲ್ಲಿ ಅಮೇರಿಕಾ ಹಾಗೂ ಚೀನಾ ನಡುವೆ ವೈಮನಸ್ಸು ತಾರಕಕ್ಕೇರಿದೆ.
ಚೀನಾದ ವುವಾನ್ ನಗರದಿಂದ ಹರಡಿದ ಕೊರೊನಾ ಬಳಿಕ ಇಡೀ ವಿಶ್ವಕ್ಕೇ ದಾಳಿಯಿಟ್ಟಿತ್ತು. ಚೀನಾ ಈ ವಿಚಾರವನ್ನು ಮುಚ್ಚಿಟ್ಟು, ಇಡೀ ವಿಶ್ವಕ್ಕೆ ಮೋಸ ಮಾಡಿದೆ ಎಂದು ಅಮೇರಿಕಾ ಇದೀಗ ಚೀನಾ ಮೇಲೆ ಗಂಭೀರ ಆರೋಪವನ್ನೂ ಮಾಡುತ್ತಿದೆ. ಅಲ್ಲದೆ ಸ್ವತಹ ಅಮೇರಿಕಾ ಅಧ್ಯಕ್ಷ ಡೊನಾಲ್ಡಾ ಟ್ರಂಪ್ ಕೊರೊನಾವನ್ನು ಚೀನಾ ವೈರಸ್ ಎಂದು ಬಹಿರಂಗ ಹೇಳಿಕೆಗಳನ್ನೂ ನೀಡಲಾರಂಭಿಸಿದ್ದಾರೆ.
ಚೀನಾ ಭಾರತದ ಗಡಿಯಲ್ಲಿ ನಿರಂತರವಾಗಿ ತಕರಾರು ಎತ್ತಿತ್ತಿರುವುದರ ನಡುವೆಯೇ ಭಾರತ ಸರಕಾರ ಚೀನಾದ ಹಲವು ಆ್ಯಪ್ ಗಳನ್ನು ಭಾರತದಲ್ಲಿ ನಿಶೇಧಿಸುವ ಮೂಲಕ ಚೀನಾಕ್ಕೆ ಡಿಜಿಟಲ್ ಆಘಾತ ನೀಡಿದೆ. ಅತ್ಯಂತ ಪ್ರಸಿದ್ಧ ಮೊಬೈಲ್ ಆಪ್ ಗಳಾದ ಟಿಕ್ ಟಾಕ್, ವಿ ಚಾಟ್ ಮೊದಲಾದ ಆ್ಯಪ್ ಗಳನ್ನು ನಿಶೇಧಿಸುವ ಮೂಲಕ ಭಾರತ ಚೀನಾಕ್ಕೆ ದೊಡ್ಡ ಮೊತ್ತದ ಶಾಕ್ ನೀಡಿದೆ.
ಈ ನಡುವೆ ಅಮೇರಿಕಾವೂ ಟಿಕ್ ಟಾಕ್ ಆ್ಯಪನ್ನು ನಿಶೇಧಿಸುವ ಚಿಂತನೆಯಲ್ಲಿದೆ. ಇವೆಲ್ಲದರ ನಡುವೆ ಗೂಗಲ್ ಸಂಸ್ಥೆಯು ಚೀನಾದ 2500 ಚಾನಲ್ ಗಳನ್ನು ಯೂ ಟೂಬ್ ನಿಂದ ಕಿತ್ತು ಹಾಕಿದೆ. ಚೀನಾ ಮೂಲದ ಈ ಚಾನಲ್ ಗಳು ಯೂ ಟೂಬ್ ನಿಂದ ಮಾಹಿತಿಗಳು ಹೊರ ಹೋಗದಂತೆ ತಡೆಯುವ ಕಾರ್ಯವನ್ನು ಈ ಚಾನಲ್ ಮೂಲಕ ಮಾಡಲಾಗಿತ್ತು ಎಂದು ಗೂಗಲ್ ಆರೋಪಿಸಿದೆ.
ಕಳೆದ ಮೇ ತಿಂಗಳಿನಿಂದ ಜೂನ್ ವರೆಗೆ ಈ ಚಾನಲ್ ಗಳನ್ನು ಯೂ ಟೂಬ್ ನಿಂದ ಕಿತ್ತು ಹಾಕುವ ಕಾರ್ಯ ನಡೆಯುತ್ತಿದೆ. ಈ ಚಾನಲ್ ಗಳ ಬಗ್ಗೆ ಸಂಪೂರ್ಣ ಪರಿಶೀಲನೆಯನ್ನು ಗೂಗಲ್ ನಡೆಸಿದ್ದು, ಬಳಿಕವೇ ಈ ನಿರ್ಧಾರಕ್ಕೆ ಬರಲಾಗಿದೆ. 2016 ಅಮೇರಿಕಾ ಅಧ್ಯಕ್ಷ ಚುನಾವಣೆ ಸಂದರ್ಭದಿಂದಲೂ ಈ ರೀತಿಯ ವರ್ತನೆಗಳನ್ನು ಈ ಚಾನಲ್ ಗಳು ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಈ ನೆಲೆಯಲ್ಲಿ ಚಾನಲ್ ಗಳನ್ನು ಕಿತ್ತು ಹಾಕಲಾಗಿದೆ. ಮೇಲ್ನೋಟಕ್ಕೆ ಇದು ಚಾನಲ್ ಗಳ ಮೇಲಿನ ಕ್ರಮವಾಗಿದ್ದರೂ, ಇದು ಅಮೇರಿಕಾ ಚೀನಕ್ಕೆ ನೀಡಿದ ಡಿಜಿಟಲ್ ಯುದ್ಧದ ವಾರ್ನಿಂಗ್ ಎಂದೇ ವಿಶ್ಲೇಷಿಸಲಾಗುತ್ತಿದೆ