Connect with us

    LATEST NEWS

    ಡಿಸೆಂಬರ್ 21 ರಿಂದ ಆಳ್ವಾಸ್‍ನಲ್ಲಿ ಸ್ಕೌಟ್ಸ್- ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿ ಜಾಂಬೂರಿ

    ಮಂಗಳೂರು ನವೆಂಬರ್ 03: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ಕೌಟ್ಸ್-ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ 2022ರ ಡಿಸೆಂಬರ್ 21ರಿಂದ 27ರವರೆಗೆ ನಡೆಯಲಿದ್ದು, ಅದರ ಯಶಸ್ಸಿಗೆ ಅಧಿಕಾರಿಗಳು ತಂಡೋಪಾದಿಯಲ್ಲಿ ಕೆಲಸ ಮಾಡುವಂತೆ ನೂತನ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ನಿರ್ದೇಶನ ನೀಡಿದರು.


    ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನ ಹಾಗೂ ಸಂಸದರು, ಶಾಸಕರು ಹಾಗೂ ಜನಪ್ರತಿನಿಧಿಗಳ ಸಹಕಾರದಲ್ಲಿ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಲ್ಲಿ ಅದರ ಕೀರ್ತಿ ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಜನರಿಗೆ ಸಂದಲಿದೆ, ಅದಕ್ಕಾಗಿ ಇದೊಂದು ಸುವರ್ಣಾವಕಾಶವಾಗಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ವಹಿಸುವ ಜವಬ್ದಾರಿ ಹಾಗೂ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು, ಮುಖ್ಯವಾಗಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುವುದರಿಂದ ಪ್ರವಾಸೋದ್ಯಮದ ಉತ್ತೇಜಕ್ಕೆ ಅನುಕೂಲಕರವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಿದರು.


    ಪ್ರಮುಖವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಪಾತ್ರ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಯಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವದ್ದಾಗಿದೆ, ಮಕ್ಕಳ ಸುರಕ್ಷತೆ, ವಾಸ್ತವ್ಯ, ಊಟೋಪಚಾರ, ಸಾರಿಗೆ ಸೇರಿದಂತೆ ಅಗತ್ಯ ಚಟುವಟಿಕೆಗಳಿಗೆ ಎಲ್ಲಿಯೂ ಚ್ಯೂತಿ ಬಾರದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು, ಅವರೊಂದಿಗೆ ಪೊಲೀಸ್ ಇಲಾಖೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ವಿವಿಧ ಇಲಾಖೆಗಳು ನಿಭಾಯಿಸಬೇಕಾದ ಹಲವು ಕರ್ತವ್ಯಗಳನ್ನು ಜಿಲ್ಲಾಧಿಕಾರಿಯವರು ತಿಳಿಸಿದರು.


    ಭಾರತ್ ಸ್ಕೌಟ್ಸ್-ಗೈಡ್ಸ್‍ನ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಮಾತನಾಡಿ, ಸ್ಕೌಟ್ಸ್-ಗೈಡ್ಸ್ ಯುವ ಜನರಲ್ಲಿ ದೇಶಾಭಿಮಾನ, ಕ್ರೀಡಾ ಮತ್ತು ಸೇವಾ ಮನೋಭಾವನೆ, ಕ್ರಿಯಾಶೀಲತೆ, ಸಚ್ಛಾರಿತ್ರ್ಯ, ಜೀವನ ಕೌಶಲ್ಯ ಹಾಗೂ ನಾಯಕತ್ವ ಗುಣಗಳನ್ನು ಕಲಿಸುವುದರೊಂದಿಗೆ ಸರ್ವಧರ್ಮಗಳ ಸಮನ್ವಯತೆಯನ್ನು ಸಾರುವುದರೊಂದಿಗೆ ಶಿಸ್ತಿನ ನಾಗರೀಕರನ್ನಾಗಿ ನಿರ್ಮಾಣ ಮಾಡುವ ಸ್ವಯಂ ಸೇವಾ ಸಂಸ್ಥೆಯಾಗಿದೆ ಎಂದರು.
    ದೇಶದಲ್ಲಿ ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿಯನ್ನು ಹಮ್ಮಿಕೊಳ್ಳಲಾಗುತ್ತಿದೆ, ಈ ಹಿಂದೆ ರಾಜ್ಯದ ಮೈಸೂರಿನಲ್ಲಿ ಎರಡು ಹಾಗೂ ಬೆಂಗಳೂರಿನಲ್ಲಿ ಒಂದು ರಾಜ್ಯಮಟ್ಟದ ಸಾಂಸ್ಕøತಿಕ ಜಾಂಬೂರಿಯನ್ನು ಆಯೋಜಿಸಲಾಗಿತ್ತು, ಇದೀಗ ಜಿಲ್ಲೆಯ ಪಾಲಿಗೆ ಅಂತರಾಷ್ಟ್ರೀಯ ಸಾಂಸ್ಕøತಿಕ ಜಾಂಬೂರಿ ಆಯೋಜಿಸುವ ಸುವರ್ಣ ಅವಕಾಶ ಒದಗಿಬಂದಿದೆ, ಈ ಕಾರ್ಯವನ್ನು ಬಹಳ ಜಾಗರೂಕತೆಯಿಂದ ಹಾಗೂ ಅಚ್ಚುಕಟ್ಟಾಗಿ ನಿಭಾಯಿಸುವ ಜವಾಬ್ದಾರಿ ಜಿಲ್ಲೆಯ ಮೇಲಿದೆ, ಅಂದಾಜು 35,000 ಶಿಬಿರಾರ್ಥಿಗಳು ಇದರಲ್ಲಿ ನೋಂದಾಯಿಸಿಕೊಳ್ಳುವ ಸಾಧ್ಯತೆಯಿದ್ದು, 10,000 ಸ್ಕೌಟ್ಸ್ ಮತ್ತು ಗೈಡ್ಸ್‍ನ ಅಧಿಕಾರಿಗಳು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುವುದು, ಕನಿಷ್ಠ ಒಂದು ಲಕ್ಷ ಜನರು ಈ ಸಾಂಸ್ಕøತಿಕ ಜಾಂಬೂರಿಯಲ್ಲಿ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.

    ಈ ವೇಳೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲಾಗುವುದು, ಉಟೋಪಚಾರ ಸೇರಿದಂತೆ ಯಾವುದೇ ರೀತಿಯ ತೊಂದರೆ ಇಲ್ಲದೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು. ಮುಖ್ಯವಾಗಿ ಇದೇ ಸಂದರ್ಭದಲ್ಲಿ ಕೃಷಿ ಮೇಳ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ, ವಿಜ್ಞಾನ ಮೇಳ, ಪುಸ್ತಕ ಮೇಳ, ಕಲಾಮೇಳ, ಆಹಾರ ಮೇಳ ಆಯೋಜಿಸಲಾಗುವುದು, ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗ, ಪಥ ಸಂಚಲನ ಸೇರಿದಂತೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಗುವುದು ಎಂದು ಹೇಳಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *