Connect with us

    LATEST NEWS

    ಉಡುಪಿ ಜಿಲ್ಲೆಗೆ 77.72 ಕೋಟಿ ರೂಪಾಯಿ ಸಾಲಮನ್ನಾ ಮೊತ್ತ ಬಿಡುಗಡೆ

    ಉಡುಪಿ ಜಿಲ್ಲೆಗೆ 77.72 ಕೋಟಿ ರೂಪಾಯಿ ಸಾಲಮನ್ನಾ ಮೊತ್ತ ಬಿಡುಗಡೆ

    ಉಡುಪಿ, ಜೂನ್ 10 : ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಅವರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 4720 ಖಾತೆಗಳು ಹಾಗೂ ಸಹಕಾರ ಸಂಘಗಳಲ್ಲಿ 24232 ರೈತರ ಖಾತೆಗಳು ಸಾಲಮನ್ನಾಗೊಳಿಸಲು ಅರ್ಹತೆ ಪಡೆದಿವೆ.

    ಈ ಪೈಕಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ರೂ. 8.26 ಕೋಟಿ ಹಾಗೂ ಸಹಕಾರಿ ಬ್ಯಾಂಕ್ ಗಳಿಗೆ 69.46 ಕೋಟಿ ರೂ. ಈಗಾಗಲೇ ರಾಜ್ಯ ಸರಕಾರದಿಂದ ಬಿಡುಗಡೆಯಾಗಿ, ರೈತರ ಖಾತೆಗಳಿಗೆ ಜಮೆಯಾಗಿ ಸಾಲಮನ್ನಾಗೊಳಿಸಲಾಗಿದೆ.

    ಆದರೆ, ಬಹುತೇಕ ಬ್ಯಾಂಕುಗಳು ಈ ಮಾಹಿತಿಯನ್ನು ರೈತರಿಗೆ ನೀಡದಿರುವುದರಿಂದ ತಮ್ಮ ಸಾಲಮನ್ನಾಗೊಂಡಿರುವ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಸಾಲಮನ್ನಾಗೆ ಹಣ ಬಿಡುಗಡೆಯಾಗಿರುವ ಪ್ರತಿಯೊಬ್ಬ ರೈತನಿಗೂ ಪತ್ರ ಮೂಲಕ ಮಾಹಿತಿ ನೀಡಲು ಅವರು ಸೂಚಿಸಿದರು.

    ರಾಜ್ಯ ಸರಕಾರದ ವಿವಿಧ ಪಿಂಚಣಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಪ್ರತೀ ತಿಂಗಳು ಸಕಾಲದಲ್ಲಿ ಪಿಂಚಣಿ ಲಭ್ಯವಾಗುವಂತೆ ಮುತುವರ್ಜಿ ವಹಿಸಬೇಕು. ಪಿಂಚಣಿ ಅದಾಲತ್ ಮೂಲಕ ಈಗಾಗಲೇ ಪಿಂಚಣಿ ವಿಳಂಭದಲ್ಲಿ ಆಗುವ ಸಮಸ್ಯೆಗಳನ್ನು ಬಗೆಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಸಮನ್ವಯ ಕೊರತೆಯಾಗದಂತೆ ಗಮನಹರಿಸಲು ಐವನ್ ಡಿಸೋಜಾ ತಿಳಿಸಿದರು.

    ಭೂ ಮಂಜೂರಾತಿಗೆ ಸಂಬಂಧಿಸಿದಂತೆ 94 ಸಿ ಅಡಿ 33728 ಅರ್ಜಿಗಳು ಹಾಗೂ 94 ಸಿಸಿ ಅಡಿಯಲ್ಲಿ 8921 ಅರ್ಜಿಗಳು ಉಡುಪಿ ಜಿಲ್ಲೆಯಲ್ಲಿ ಸ್ವೀಕೃತವಾಗಿದೆ. ಈ ಪೈಕಿ ಶೇಕಡಾ 86 ರಷ್ಟು ಅರ್ಜಿಗಳು ವಿಲೇವಾರಿಯಾಗಿರುವುದು ಶ್ಲಾಘನೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭೂದಾಖಲೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ಆಯಾ ಗ್ರಾಮ ಮಟ್ಟದಲ್ಲೇ ವಿಶೇಷ ಅದಾಲತ್ ನಡೆಸಿ ಪರಿಹಾರ ಒದಗಿಸಬೇಕು. ಭೂಪರಿವರ್ತನೆಗೆ ಪ್ರಸಕ್ತ ಆನ್‍ಲೈನ್ ಮೂಲಕವೇ ಎಲ್ಲಾ ಪ್ರಕ್ರಿಯೆ ನಡೆಸಿ ಅರ್ಜಿ ಸಲ್ಲಿಸಲು ರಾಜ್ಯ ಸರಕಾರ ವ್ಯವಸ್ಥೆ ಜಾರಿಗೆ ತಂದಿದೆ ಎಂದು ಐವನ್ ಡಿಸೋಜಾ ತಿಳಿಸಿದರು.

    ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಗೆ ಪ್ರಸಕ್ತ ಒಂದು ಉಪವಿಭಾಗ ಮಾತ್ರ ಇದ್ದು, ಆಡಳಿತಾತ್ಮಕ ದೃಷ್ಟಿಯಿಂದ ಉಡುಪಿಯಲ್ಲಿ ಇನ್ನೊಂದು ಉಪವಿಭಾಗ ಅಗತ್ಯವಿದೆ. ಅಲ್ಲದೇ, ಗ್ರಾಮಕರಣಿಕರಿಗೆ ಆಯಾ ಗ್ರಾಮದಲ್ಲಿಯೇ ಕಚೇರಿ ಒದಗಿಸಲು ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ರಾಜ್ಯ ಸರಕಾರದಿಂದ ಮಂಜೂರುಗೊಳಿಸಲು ಮನವಿ ಮಾಡಿದರು. ಅಲ್ಲದೇ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮಂಜೂರುಗೊಂಡ ಸರಕಾರದ ಭೂಮಿಗಳಲ್ಲಿ ಕೆಲವೆಡೆ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಈಗಾಗಲೇ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜಾ ಅವರು ಉಡುಪಿಗೆ ಪ್ರತ್ಯೇಕ ಉಪ ವಿಭಾಗ ರಚಿಸಲು ಸರಕಾರದ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *