Connect with us

DAKSHINA KANNADA

ವಿದೇಶಿ ಯುವತಿಗೆ ಸ್ವದೇಶಿ ಬಾಲಕನಿಂದ ಲೈಂಗಿಕ ಕಿರುಕುಳ

ವಿದೇಶಿ ಯುವತಿಗೆ ಸ್ವದೇಶಿ ಬಾಲಕನಿಂದ ಲೈಂಗಿಕ ಕಿರುಕುಳ

ಮಂಗಳೂರು, ಸೆಪ್ಟೆಂಬರ್ 23 :ಅಧ್ಯಯನಕ್ಕೆಂದು ದಕ್ಷಿಣಕನ್ನಡ ಜಿಲ್ಲೆಗೆ ಬಂದಿದ್ದ ವಿದೇಶಿ ಯುವತಿಯೋರ್ವಳಿಗೆ ಅಪ್ರಾಪ್ತ ಬಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯ ಪಾಣೀರು ಎಂಬಲ್ಲಿ ನಡೆದಿದೆ.

ಜರ್ಮನಿಯಿಂದ ಬಂದಿದ್ದ ಯುವತಿ ಪಾಣೀರು ಎಂಬ ಪ್ರದೇಶದಲ್ಲಿರುವ ಆಶ್ರಮಕ್ಕೆ ಅಧ್ಯಯನಕ್ಕಾಗಿ ಬಂದಿದ್ದರು. ಅಧ್ಯಯನ ಮುಗಿಸಿದ ಬಳಿಕ ಯುವತಿ ದೇರಳಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಯುವತಿಯ ಮುಂದೆ ಅಪ್ರಾಪ್ತ ವಯಸ್ಸಿನ ಬಾಲಕ ಪತ್ತೆಯಾಗಿದ್ದ.

ಸುಮಾರು 16 ವರ್ಷ ಪ್ರಾಯದ ಈ ಬಾಲಕ ಯುವತಿಯ ಮೈಗೆ ಕೈ ಹಾಕಿ ಕಿರುಕುಳ ನೀಡಿದ್ದಾನೆ. ಇದರಿಂದ ವಿಚಲಿತಗೊಂಡ ಯುವತಿ ರಕ್ಷಣೆಗಾಗಿ ಅಂಗಲಾಚಿದ್ದಾಳೆ. ಯುವತಿಯ ಈ ಧ್ವನಿಯನ್ನು ಕೇಳಿದ ಸ್ಥಳೀಯರು ಅಪ್ರಾಪ್ತ ಬಾಲಕನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಅಲ್ಲದೆ ಯುವಕನನ್ನು ಹಿಡಿದು ಕೊಣಾಜೆ ಪೋಲೀಸ್ ವಶಕ್ಕೆ ನೀಡಿದ್ದಾರೆ.

ಹಾಡುಹಗಲೇ ಈ ರೀತಿಯ ಘಟನೆ ನಡೆದಿರುವುದು ಮಹಿಳೆಯರ ಸುರಕ್ಷತೆಯ ಬಗ್ಗೆ ಆತಂಕವೂ ಇದೀಗ ವ್ಯಕ್ತವಾಗುತ್ತಿದೆ. ದೇರಳೆಕಟ್ಟೆ ಭಾಗದಲ್ಲಿ ಹಲವು ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಾಗೂ ಇನ್ಪೋಸಿಸ್ ಮೊದಲಾದ ಸಂಸ್ಥೆಗಳಿದ್ದು, ಇಲ್ಲಿ ಸಾವಿರಾರು ಸಂಖ್ಯೆಯ ಹೊರ ರಾಜ್ಯ ಸೇರಿದಂತೆ ವಿದೇಶೀ ಯುವತಿಯರು ತಂಗಿದ್ದಾರೆ.

ಈ ಹಿಂದೆ ಇದೇ ದೇರಳಕಟ್ಟೆಯಲ್ಲಿ ಯೆನಪೋಯ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೂ ಅತ್ಯಾಚಾರ ಯತ್ನ ನಡೆದಿತ್ತು. ಎರಡು ದಿನಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪೋಲೀಸರಿಗೆ ವಿದೇಶೀ ಪ್ರಜೆಗಳ ರಕ್ಷಣೆಗೆ ಸೂಕ್ತ ಭದ್ರತೆಯನ್ನು ನೀಡಬೇಕೆಂಬ ಖಡಕ್ ಸೂಚನೆಯನ್ನೂ ನೀಡಿದ್ದರು. ಈ ಸೂಚನೆ ನೀಡಿ ಎರಡು ದಿನ ಕಳೆಯುತ್ತಿದ್ದಂತೆ ದೇರಳಕಟ್ಟೆಯಲ್ಲಿ ವಿದೇಶಿ ಯುವತಿಗೆ ಹಾಡುಹಗಲೇ ಲೈಂಗಿಕ ಕಿರುಕುಳ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Advertisement
Click to comment

You must be logged in to post a comment Login

Leave a Reply