LATEST NEWS
ಸಮುದ್ರ ಮಧ್ಯೆ ಮೀನುಗಾರಿಕಾ ಬೋಟ್ ನಲ್ಲಿ ಸಿಲಿಂಡರ್ ಸ್ಪೋಟ…11 ಮಂದಿಯ ರಕ್ಷಣೆ

ಮಂಗಳೂರು:ಸಮುದ್ರದ ಮಧ್ಯೆ ಮೀನುಗಾರಿಕೆ ಸಂದರ್ಭ ದೋಣಿಯಲ್ಲಿದ್ದ ಸಿಲಿಂಡರ್ ಸ್ಪೋಟಗೊಂಡು ಅಪಾಯದಲ್ಲಿದ್ದ 11 ಮೀನುಗಾರರನ್ನು ಕರಾವಳಿ ರಕ್ಷಣಾ ಪಡೆ ರಕ್ಷಿಸಿದೆ.
ತಮಿಳುನಾಡು ಮೂಲದ ಮೀನುಗಾರಿಕಾ ನೌಕೆ ಮಂಗಳೂರಿನಿಂದ 140 ನಾಟಿಕಲ್ ಮೈಲಿ ಪಶ್ಚಿಮದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಆ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ಬೋಟ್‌ನಲ್ಲಿ ಬೆಂಕಿ ಆವರಿಸಿದೆ. ಈ ಬಗ್ಗೆ ದೋಣಿಯವರಿಂದ ಅಪಾಯದ ಸಂದೇಶ ಕೋಸ್ಟ್‌ಗಾರ್ಡ್‌ಗೆ ತಲಪಿದೆ.

ತಕ್ಷಣವೇ ಮುಂಬೈ ಕರಾವಳಿ ರಕ್ಷಣಾ ಪಡೆಯಿಂದ ಸಾಚೇತ್ ಮತ್ತು ಸುಜೀತ್ ಎನ್ನುವ ಎರಡು ಕಾವಲು ನೌಕೆಗಳನ್ನು ಸಹಾಯಕ್ಕಾಗಿ ಕಳುಹಿಸಲಾಯಿತು. ಅಪಾಯಕ್ಕೆ ಸಿಲುಕಿದ್ದ ಬೋಟ್‌ನ ತ್ವರಿತ ಪತ್ತೆಗಾಗಿ ಡಾರ್ನಿಯರ್ ವಿಮಾನವನ್ನೂ ಕಳುಹಿಸಲಾಯಿತು. ಬೋಟ್ ಪತ್ತೆ ಮಾಡಿದ್ದಲ್ಲದೆ ಮೀನುಗಾರರ ನೌಕೆಯೊಂದಿಗೆ ಸಂವಹನ ಸಾಧಿಸಿ ಧೈರ್ಯ ತುಂಬಲಾಯಿತು.
ಘಟನೆಯಲ್ಲಿ ಗಾಯಗೊಂಡಿರುವ ಓರ್ವ ಮೀನುಗಾರ ಹಾಗೂ ಇತರ ಮೀನುಗಾರರನ್ನು ನವಮಂಗಳೂರು ಬಂದರಿಗೆ ಕರೆತರಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.