LATEST NEWS
ಚೀನೀ ಕಾಯಿಯೊಳಗೆ 10 ಕೆಜಿ ಗಾಂಜಾ

ಚೀನೀ ಕಾಯಿಯೊಳಗೆ 10 ಕೆಜಿ ಗಾಂಜಾ
ಮಂಗಳೂರು ಮೇ 19: ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ಗಾಂಜಾ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಯಶಸ್ವಿಯಾಗಿದ್ದು, ಒಬ್ಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ 10 ಕೆಜಿ ಯಷ್ಟು ಗಾಂಜಾವನ್ನು ಚೀನಿಕಾಯಿಯೊಳಗೆ ಇಟ್ಟು ಅಕ್ರಮ ಸಾಗಾಟಕ್ಕೆ ಯತ್ನಿಸಿದ್ದಾನೆ.
ಕಲಾಯಿ ನಿವಾಸಿ ತಸ್ಲೀಮ್ ಯಾನೆ ಬಶೀರ್ ಚೀನೀಕಾಯಿಯೊಳಗೆ ಗಾಂಜಾ ಸಾಗಾಟ ಮಾಡಿ ಸಿಕ್ಕಿ ಬಿದ್ದಿರುವ ಆರೋಪಿ. ಈತ ಶುಕ್ರವಾರ ಸಾಯಂಕಾಲ ದೋಹಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಲಗೇಜು ತಪಾಸಣೆ ವೇಳೆ ಅಕ್ರಮ ಸಾಗಾಟ ಬೆಳಕಿಗೆ ಬಂದಿದೆ.

ತಸ್ಲೀಮ್ ಸಾಯಂಕಾಲ 5.35ಕ್ಕೆ ದೋಹಾಗೆ ವಿಮಾನದಲ್ಲಿ ತೆರಳಬೇಕಿತ್ತು. ಅದಕ್ಕಾಗಿ 2 ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಟಿಕೆಟ್ ತಪಾಸಣೆಯ ಬಳಿಕ ಪ್ರವೇಶ ದ್ವಾರದಲ್ಲಿ ಲಗೇಜು ಪರಿಶೀಲನೆ ನಡೆಸಲಾಯಿತು. ಆಗ ಮೂರು ಚೀನಿ ಕಾಯಿ ಭದ್ರತಾ ಪಡೆಗಳ ಸಂಶಯಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರಯಾಣಿಕ ತಸ್ಲೀಮ್ ಕಲಾಯಿ ಬಶೀರ್‌ನ್ನು ಪ್ರಶ್ನಿಸಿದಾಗ ಸಮರ್ಪಕವಾಗಿ ಉತ್ತರಿಸಲಿಲ್ಲ.
ಇದರಿಂದ ಮತ್ತಷ್ಟು ಸಂಶಯಗೊಂಡ ಭದ್ರತಾ ಪಡೆಗಳು ಚೀನಿ ಕಾಯಿಯನ್ನು ತುಂಡರಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿತ್ತು. ಮೂರು ಚೀನಿ ಕಾಯಿಯೊಳಗೆ ಗಾಂಜಾವನ್ನು ವಿಭಾಗಿಸಿ ಇರಿಸಲಾಗಿತ್ತು. ಅದಕ್ಕಾಗಿ ಚೀನಿಕಾಯಿಯ ಒಳಗಿನ ತಿರುಳನ್ನು ತೆಗೆದು ಗಾಂಜಾವನ್ನು ಹುದುಗಿಸಿ ಹೊರಗೆ ಸಂಶಯ ಬಾರದಂತೆ ಅಂಟಿಸಲಾಗಿತ್ತು.
ಚೀನಿಕಾಯಿಯ ಹೊರಗೆ ಗಾಯದ ಗುರುತು ಕಂಡ ಭದ್ರತಾಪಡೆ ಶಂಕೆಯ ಮೇರೆಗೆ ಹೆಚ್ಚಿನ ತಪಾಸಣೆ ನಡೆಸಿದಾಗ ಈ ಕೃತ್ಯ ಗೊತ್ತಾಗಿತ್ತು. ಗಾಂಜಾವನ್ನು ವಶಪಡಿಸಿರುವುದಾಗಿ ಭದ್ರತಾಪಡೆಯ ಮೂಲಗಳು ತಿಳಿಸಿವೆ. ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.