LATEST NEWS
ಮಂಗಳೂರು – ಗಾಂಜಾ ದಂಧೆ ಮತ್ತೆ ಇಬ್ಬರು ಅರೆಸ್ಟ್..ಬಂಧಿತರ ಸಂಖ್ಯೆ 15ಕ್ಕೆ ಏರಿಕೆ…!!
ಮಂಗಳೂರು ಜನವರಿ 13: ಮಂಗಳೂರಿನಲ್ಲಿ ನಡೆಯುತ್ತಿರುವ ವೈದ್ಯಕೀಯ ವಿಧ್ಯಾರ್ಥಿಗಳ ಗಾಂಜಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಓರ್ವ ವೈದ್ಯ ಮತ್ತು ವೈದ್ಯಕೀಯ ವಿಧ್ಯಾರ್ಥಿನಿ ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 15 ಮಂದಿಯನ್ನು ಬಂಧಿಸಲಾಗಿದ್ದು, ಅದರಲ್ಲಿ 13 ಮಂದಿ ವೈದ್ಯರೇ ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಡಿಸೆಂಬರ್ ಅಂತ್ಯ ಮತ್ತು ಜನವರಿ ತಿಂಗಳಿನಲ್ಲಿ ಮಾದಕ ವಸ್ತುಗಳ ವ್ಯವಹಾರ ಹೆಚ್ಚು ಎನ್ನುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಸಿಸಿಬಿ ಪೊಲೀಸರು ಕಾರ್ಯಾಚರಣೆಯಲ್ಲಿ ಸುಮಾರು 10 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಎನ್.ಆರ್.ಪುರ ಮೂಲದ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ. ಬೆಂಗಳೂರು ಮತ್ತು ಆಂದ್ರಪ್ರದೇಶದಿಂದ ಗಾಂಜಾ ಖರೀದಿಸಿ ಕರಾವಳಿಯಲ್ಲಿ ದಂಧೆ ನಡೆಸಲಾಗುತ್ತಿದ್ದು. ಕಳೆದ 10 ದಿನದಲ್ಲಿ ಪೊಲೀಸರು 100 ಕೆಜಿ ಗಾಂಜಾ ವಶ, 6 ಪ್ರಕರಣ ದಾಖಲಿಸಿ 20 ಕ್ಕೂ ಮಿಕ್ಕಿದ ಆರೋಪಿಗಳ ಬಂಧಿಸಿದ್ದಾರೆ.
ವೈದ್ಯಲೋಕದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 15 ಆರೋಪಿಗಳನ್ನು ಬಂಧಿಸಲಾಗಿದ್ದು, ಆ ಪೈಕಿ 13 ಆರೋಪಿಗಳು ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಹಲವು ಆರೋಪಿಗಳು ಪರಾರಿಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ನೀಲ್ ಕಿಶೋರಿಲಾಲ್ ರಾಮ್ ಜಿ ಶಾ ಅಪಾರ್ಟ್‌ಮೆಂಟ್ ಒಂದರಲ್ಲಿ ಪಾರ್ಟಿ ಆಯೋಜಿಸುವ ಮೂಲಕ ಡ್ರಗ್ಸ್ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಮಂಗಳೂರಿನ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಅಪಾರ್ಟ್ಮೆಂಟ್ ಇದಾಗಿದ್ದು, ಪಾರ್ಟಿಗೆ ಬರುವ ವಿದ್ಯಾರ್ಥಿಗಳಿಗೆ ಡ್ರಗ್ಸ್ ರುಚಿ ತೋರಿಸಿ ವ್ಯವಹಾರ ನಡೆಸುತ್ತಿದ್ದ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.