LATEST NEWS
ಗ್ಯಾಂಗ್ ರೇಪ್- ದೂರು ನೀಡಲು ಹೋದ ಮಹಿಳೆ ಮೇಲೆ ಇನ್ಸ್‌ಪೆಕ್ಟರ್‌ನಿಂದಲೂ ಅತ್ಯಾಚಾರ

ಲಕ್ನೋ: ಉತ್ತರ ಪ್ರದೇಶದ ಶಹಜಾನ್‍ಪುರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಮಹಿಳೆ ದೂರಿನನ್ವಯ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಚಂದ್ರ ಅವರು ತನಿಖೆಗೆ ಆದೇಶಿಸಿದ್ದಾರೆ.
ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ 35 ವರ್ಷದ ಮಹಿಳೆ ಘಟನೆ ಕುರಿತು ವಿವರಿಸಿದ್ದು, ನವೆಂಬರ್ 30ರಂದು ಗುರುವಾರ ಐವರು ಕಾರಿನಲ್ಲಿ ಆಗಮಿಸಿ ನನ್ನನ್ನು ಖಾಲಿ ಜಾಗಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ತಿಳಿಸಿದ್ದಾಳೆ.

ಘಟನೆ ಬಳಿಕ ದೂರು ನೀಡಲು ಜಲಾಲಾಬಾದ್ ಪೊಲೀಸ್ ಠಾಣೆಗೆ ತೆರಳಿದೆ. ಆಗ ಠಾಣೆಯಲ್ಲಿ ಸಬ್ ಇನ್‍ಸ್ಪೆಕ್ಟರ್ ಇದ್ದರು. ಅವರೂ ಸಹ ತಮ್ಮ ರೂಮ್‍ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದರು. ಪ್ರಕರಣ ದಾಖಲಿಸಲು ಸಾಧ್ಯವಾಗದ್ದಕ್ಕೆ ಹಿರಿಯ ಪೊಲೀಸ್ ಅಧಿಕಾರಿ ಅವಿನಾಶ್ ಚಂದ್ರ ಅವರನ್ನು ಸಂಪರ್ಕಿಸಿ, ಘಟನೆ ಬಗ್ಗೆ ವಿವರಿಸಿದೆ ಎಂದು ಮಹಿಳೆ ತಿಳಿಸಿದ್ದಾಳೆ.
ಪೊಲೀಸ್ ಅಧಿಕಾರಿ ಬ್ರಹ್ಮಪಾಲ್ ಸಿಂಗ್ ಈ ಕುರಿತು ಮಾಹಿತಿ ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಆದೇಶಿಸಲಾಗಿದೆ. ಮಹಿಳೆ ಮಾಡಿದ ಆರೋಪಗಳು ನಿಜವೆಂದು ಸಾಬೀತಾದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.