BANTWAL
ತುಳಸೀವನ ಗಣೇಶೋತ್ಸವ ಶೋಭಯಾತ್ರೆ ವೇಳೆ ಪಾನೀಯ ನೀಡದಂತೆ ಬೋಳಂತೂರು ಮಸೀದಿ ಸಮಿತಿಗೆ ಮನವಿ
ಬಂಟ್ವಾಳ ಸೆಪ್ಟೆಂಬರ್ 09: ಗಣೇಶೋತ್ಸವ ಸಂದರ್ಭ ದೇವಸ್ಥಾನಗಳಲ್ಲಿ ನೀಡುವ ಪ್ರಸಾದಕ್ಕೆ FSSAI ಸರ್ಟಿಫಿಕೇಟ್ ಕಡ್ಡಾಯ ಮಾಡಿರುವ ರಾಜ್ಯ ಸರಕಾರದ ನಿರ್ಧಾರಕ್ಕೆ ಬಂಟ್ವಾಳದ ಬೋಳಂತೂರಿನ ತುಳಸೀವನ ಗಣೇಶೋತ್ಸವ ಸಮಿತಿ ಸಡ್ಡು ಹೊಡೆದಿದ್ದು, ಪ್ರತಿ ವರ್ಷ ಗಣೇಶ ವಿಸರ್ಜನೆ ಸಂದರ್ಭದ ಶೋಭಾಯಾತ್ರೆ ವೇಳೆ ಸ್ಥಳೀಯ ಮಸೀದಿಗೆ ಪಾನೀಯ ಹಾಗೂ ಸಿಹಿ ತಿಂಡಿ ವಿತರಣೆ ಮಾಡದಂತೆ ಇದೀಗ ಮನವಿ ಮಾಡಿದೆ.
ಕಳೆದ ವರ್ಷ ಬೋಳಂತೂರು ಮಸೀದಿ ವತಿಯಿಂದ ಗಣೇಶೋತ್ಸವದ ಶೋಭಾಯಾತ್ರೆಗೆ ಸಿಹಿತಿಂಡಿ ಮತ್ತು ತಂಪು ಪಾನೀಯ ವಿತರಿಸಲಾಗಿತ್ತು. ಇದು ಕೋಮುವಾದದ ನೆಲದಲ್ಲಿ ಭಾವೈಕ್ಯದ ಸಂದೇಶ ಸಾರಿತ್ತು. ಆದರೆ ಈ ಬಾರಿ ಬೊಳಂತೂರು ಶ್ರೀ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿಯು ಮಸೀದಿಗೆ ಪತ್ರ ಬರೆದು ‘ಕಳೆದ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿದರು. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂದವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ’ಎಂದು ಪತ್ರದಲ್ಲಿ ಬರೆಯಲಾಗಿದೆ.