LATEST NEWS
ಕೊರೊನಾ ಕರಿಛಾಯೆ ನಡುವೆ ಈ ಬಾರಿಯ ವಿಘ್ನನಿವಾರಕನ ಹಬ್ಬ

ಉಡುಪಿ : ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಹಬ್ಬ ಪ್ರತೀ ಬಾರಿಯೂ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಗಣೇಶ ಹಬ್ಬಕ್ಕೆ ಈ ಬಾರಿ ಕೊರೊನಾ ಕರಿಛಾಯೆ ಆವರಿಸಿದೆ. ಗಣೇಶ ಮೂರ್ತಿ ತಯಾರಿಸುವ ಕಲಾವಿದರ ಬದುಕಿಗೂ ಹೊಡೆತ ಬಿದ್ದಿದೆ.
ಕೊರೊನಾ ಕೇಸ್ ಮಾರ್ಚ್ ತಿಂಗಳಿನಿಂದ ಕಡಿಮೆಯಾಗುತ್ತಿಲ್ಲ. ದಿನದಿಂದ ದಿನಕ್ಕೆ ಕೇಸ್ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಕೊರೊನಾ ಪ್ರಕರಣ ಪ್ರತಿ ನಿತ್ಯ 5 ಸಾವಿರಕ್ಕಿಂತಲೂ ಅಧಿಕವೇ ಇದೆ. ಇಂಥ ಸಂದರ್ಭದಲ್ಲಿ ಗಣೇಶ ಹಬ್ಬ ಬರುತ್ತಿದೆ. ಮೊದಲೇ ಸಾರ್ವಜನಿಕ ಪ್ರತಿಷ್ಟಾಪನೆಗೆ ಹೆಚ್ಚು ಆದ್ಯತೆ ಇರುವ ಗಣೇಶ ಹಬ್ಬಕ್ಕೆ ಈ ಬಾರಿ ಸರ್ಕಾರ ಸಾಕಷ್ಟು ಮಾರ್ಗಸೂಚಿಗಳನ್ನು ನೀಡಿದೆ.

ಹಬ್ಬಗಳು ಅಂದ್ರೆ ಕೇವಲ ಸಂಭ್ರಮವಲ್ಲ. ಅದು ಕೇವಲ ಹಬ್ಬವಾಗಿರದೆ ಹಲವರ ಬದುಕಿನ ಆಸರೆಯೂ ಹೌದು. ಒಂದು ಹಬ್ಬ ಬಂದಾಗ ಮೂರ್ತಿ ತಯಾರಿಸುವ ಕಲಾವಿದರು ಹೂ ಮಾರಾಟ ಮಾಡುವವರು ಕಲಾವಿದರು ಶಾಮಿಯಾನ ಜನರೇಟರ್ ಕೆಟರಿಂಗ್ ಮುದ್ರಣದವರು ನೀರು ಸರಬರಾಜು ಕಸ ವಿಲೇವಾರಿ ಬಾಳೆ ಎಲೆ ಹಣ್ಣು ತರಕಾರಿ ಹೀಗೆ ಎಲ್ಲಾ ಬಗೆಯವರಿಗೆ ಅನ್ನದ ದಾರಿ. ಆದ್ರೆ ಈ ಬಾರಿ ಸರಕಾರ ಸಾರ್ವಜನಿಕ ಗಣೇಶೋತ್ಸವಕ್ಕೆ ನಿರ್ಬಂಧ ಹೇರಿದ ಕಾರಣ ಎಲ್ಲಾ ವರ್ಗದವರಿಗೂ ಹೊಡೆತ ಬಿದ್ದಿದೆ.
ಗಣೇಶ ಮೂರ್ತಿ ರಚಿಸುವ ಕಲಾವಿದರು ಎರಡು ತಿಂಗಳಿನಿಂದ ಸತತ ಪ್ರಯತ್ನ ನಡೆಸುತ್ತಾರೆ. ಅದಕ್ಕಾಗಿ ವೃತ ನಿಯಮಗಳನ್ನು ಪಾಲಿಸಿ ಭಕ್ತಿಯಿಂದ ತಮ್ಮ ಕಾರ್ಯ ನಡೆಸುತ್ತಾರೆ. ಮಣ್ಣು ಖರೀದಿಸಿ ಅದಕ್ಕೆ ಬೇಕಾದ ಬಣ್ಣಗಳನ್ನು ತರಿಸಿ ಶ್ರಮ ವಹಿಸುತ್ತಾರೆ. ಕೊರೊನಾ ದೂರವಾಗಬಹುದು ಎಂಬ ಆಸೆಯಿಂದ ತಯಾರಿಸಿದ ಮೂರ್ತಿಗಳು ಹಾಗೇ ಉಳಿದಿವೆ. ಈ ಬಾರಿ ಕೊರೊನಾ ವಕ್ಕರಿಸಿ ಹಲವರ ಹೊಟ್ಟೆಗೆ ಕೊಳ್ಳಿ ಇಟ್ಟಿದೆ. ಹಬ್ಬ ಹರಿದಿನಗಳಲ್ಲಿಯೇ ವ್ಯಾಪಾರ ನಡೆಸಿ ಬದುಕುವ ಜನ ಬೇಸತ್ತಿದ್ದಾರೆ.
ಒಟ್ಟಾರೆಯಾಗಿ ಕೊರೊನಾ ವರ್ಷದ ಬದುಕು ಕಸಿದಿದೆ. ಬದುಕಿನ ದಾರಿಗಳು ಮುಚ್ಚಿದಂತೆ ಭಾಸವಾಗುತ್ತಿದೆ. ಆದರೂ ಬದುಕು ನಡೆಸಲು ಹೊಸ ದಿಶೆಯ ಪ್ರಯತ್ನದ ಅಗತ್ಯವಿದೆ. ಕೊರೊನಾ ಒಂದು ವರ್ಷದ ಹಬ್ಬವನ್ನು ಕಸಿದು ಹಲವು ವರ್ಷಗಳಿಗೆ ಉಳಿಯಬಹುದಾದ ನೋವು ಇಟ್ಟಿದೆ.