LATEST NEWS
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ – ಪಕ್ಕಾ ಪ್ಲ್ಯಾನ್ ಹಣ ಮತ್ತು ಚಿನ್ನವನ್ನು ಮೂಟೆಯಲ್ಲಿ ಹೊತ್ತೊಯ್ದ ದರೋಡೆಕೋರರು
ಮಂಗಳೂರು ಜನವರಿ 17: ಸಿಎಂ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿರುವಾಗಲೇ ದೊಡ್ಡ ದುರಂತ ನಡೆದಿದ್ದು, ಮಟ ಮಟ ಮಧ್ಯಾಹ್ನವೇ ಸಿನಿಮಾ ಶೈಲಿಯಲ್ಲೇ ಮಂಗಳೂರು ಬ್ಯಾಂಕ್ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್ಗೆ ನುಗ್ಗಿ ಹಾಡುಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್ಗೆ ನುಗ್ಗಿದ ಐದು ಜನರ ಖತರ್ನಾಕ್ ಕಳ್ಳರ ಗ್ಯಾಂಗ್ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್ ಆಗಿದೆ.
ಸುಮಾರು 10 ರಿಂದ 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್ ಆದ ಗ್ಯಾಂಗ್ ಕನ್ನಡದಲ್ಲೇ ಮಾತಾಡುತ್ತಿದ್ದರು ಎಂದು ತಿಳಿದು ಬಂದಿದೆ. ಫಿಯೆಟ್ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ.
ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು. ಮಂಗಳೂರಲ್ಲಿ ಸಿಎಂ ಪ್ರೋಗ್ರಾಮ್ ಇದ್ದ ಕಾರಣ ಹೆಚ್ಚಿನ ಪೊಲೀಸ್ ಭದ್ರತೆ ಕೂಡ ಇತ್ತು. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿ ಪಕ್ಕಾ ಪ್ಲಾನ್ ಮಾಡಿ ಕದಿಯಲಾಗಿದೆ.
ಒಬ್ಬ ಬ್ಯಾಂಕ್ ಹೊರಗೆ ಫಿಯೆಟ್ ಕಾರಲ್ಲಿ ಕೂತಿದ್ದ. ಇನ್ನೂ ನಾಲ್ವರು ಸ್ಟೈಲ್ ಆಗಿ ಬ್ಯಾಂಕ್ ಒಳಗೆ ಹೋದರು. ಮಧ್ಯಾಹ್ನ ಯಾರು ಇಲ್ಲದ ಹೊತ್ತಲ್ಲಿ ಫೋನಲ್ಲಿ ಮಾತಾಡುತ್ತಾ ಆರಾಮಾಗಿ ಬ್ಯಾಂಕ್ಗೆ ನುಗ್ಗಿದರು. ಕೇವಲ 5 ನಿಮಿಷದಲ್ಲಿ ಮೂಟೆಯಲ್ಲಿ ಹಣ ಮತ್ತು ಚಿನ್ನ ತುಂಬಿ ಎಸ್ಕೇಪ್ ಆಗಿದ್ದಾರೆ. ಮೊದಲು ಇಬ್ಬರು ಮೂಟೆ ತೆಗೆದುಕೊಂಡು ಬ್ಯಾಂಕ್ನಿಂದ ಹೊರಬಂದು ಕಾರು ಹತ್ತಿದರು. ನಂತರ ಇನ್ನಿಬ್ಬರು ಬಂದು ಕಾರು ಒಳಗೆ ಕೂತರು. ಸಲೀಸಾಗಿ ಯಾವುದೇ ಭಯ ಇಲ್ಲದೆ ದರೋಡೆ ಮಾಡಿದ ಹಣವನ್ನು ಕಾರಿನಲ್ಲಿ ಸಾಗಿಸಿದ್ರು.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್, “ಹಿಂದಿಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು, ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಕಪಾಟನ್ನು ತೆರೆಸಿ, ದರೋಡೆ ಮಾಡಿದ್ದಾರೆ. ಕದ್ದ ವಸ್ತುಗಳ ಮೌಲ್ಯ ಸುಮಾರು 10 ರಿಂದ 12 ಕೋಟಿಗಳಷ್ಟಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಆದರೂ ವಿವರವಾದ ಮೌಲ್ಯಮಾಪನಗಳು ನಡೆಯುತ್ತಿವೆ” ಎಂದು ತಿಳಿಸಿದ್ದಾರೆ.
ಅಪರಾಧಿಗಳು ಕಪ್ಪು ಫಿಯೆಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣದ ತನಿಖೆ ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಲಭ್ಯವಿರುವ ಸುಳಿವುಗಳು ಮತ್ತು ತಾಂತ್ರಿಕ ಕಣ್ಗಾವಲಿನ ಆಧಾರದ ಮೇಲೆ ಶಂಕಿತರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.
ಬ್ಯಾಂಕ್ ಸಿಬ್ಬಂದಿ ಬೊಬ್ಬೆ ಕೇಳಿ ಕೆಳಭಾಗದಲ್ಲಿದ್ದ ವಿದ್ಯಾರ್ಥಿಗಳು ಮೊದಲ ಮಹಡಿಯಲ್ಲಿರುವ ಬ್ಯಾಂಕಿನತ್ತ ದೌಡಾಯಿಸಿದ್ದರು. ದರೋಡೆಕೋರರು ಈ ವೇಳೆಯೂ ವಿದ್ಯಾರ್ಥಿಗಳಿಗೆ ವಾಪಸ್ ಹೋಗುವಂತೆ ಬೆದರಿಸಿದ್ದಾರೆ. ವಿದ್ಯಾರ್ಥಿಗಳ ಜೊತೆ ಆಗಂತುಕರು ಕನ್ನಡದಲ್ಲಿ ಮಾತನಾಡಿದ್ದರೆ, ಬ್ಯಾಂಕ್ ಸಿಬ್ಬಂದಿ ಜೊತೆ ಹಿಂದಿ ಭಾಷೆಯಲ್ಲಿ ಸಂಭಾಷಣೆ ನಡೆಸಿದ್ದಾರೆ.
ಬ್ಯಾಂಕಿನ ಸಿಸಿಟಿವಿ ದುರಸ್ತಿಗೆಂದು ತಂತ್ರಜ್ಞರೊಬ್ಬ ಬೆರಳಿನಲ್ಲಿದ್ದ ಉಂಗುರವನ್ನು ದೋಚಿರುವ ದರೋಡೆಕೋರರು, ಗೋಣಿ ಚೀಲದಲ್ಲಿ ಚಿನ್ನ ಹಾಗೂ ನಗದನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ.