LATEST NEWS
ಕೊನೆಗೂ ಘನವಾಹನಗಳಿಗೆ ನಾಳೆಯಿಂದ ಶಿರಾಢಿ ಘಾಟ್ ಓಪನ್
ಕೊನೆಗೂ ಘನವಾಹನಗಳಿಗೆ ನಾಳೆಯಿಂದ ಶಿರಾಢಿ ಘಾಟ್ ಓಪನ್
ಮಂಗಳೂರು ನವೆಂಬರ್ 11:ಭಾರಿ ಮಳೆ ಹಾಗೂ ಭೂಕುಸಿತದಿಂದ ಹಾನಿಗೊಳಗಾಗಿದ್ದ ಶಿರಾಢಿ ಘಾಟ್ ರಸ್ತೆಯಲ್ಲಿ ನಾಳೆಯಿಂದ ಎಲ್ಲಾ ರೀತಿಯ ಘನವಾಹನಗಳಿಗೆ ಸಂಚಾರ ಮುಕ್ತಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ತಿಳಿಸಿದ್ದಾರೆ.
ಮಳೆಯಿಂದ ಹಾನಿಗೊಳಗಾಗಿದ್ದ ಶಿರಾಢಿ ಘಾಟ್ ನಲ್ಲಿ ಹಂತಹಂತವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ನಡುವೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸೋಮವಾರದಿಂದ ಎಲ್ಲಾ ರೀತಿಯ ಘನವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆದೇಶಿಸಿದ್ದರು.
ಆದರೆ ದ.ಕ. ಜಿಲ್ಲಾಧಿಕಾರಿ ಅವರಿಂದ ಪೊಲೀಸ್ ಇಲಾಖೆಗೆ ಭಾರಿ ವಾಹನಗಳ ಸಂಚಾರ ಬಗ್ಗೆ ಸ್ಪಷ್ಟ ಆದೇಶ ತಲುಪದ ಕಾರಣ ಗುಂಡ್ಯ ಗೇಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪ್ಪಿನಂಗಡಿ ಪೊಲೀಸರು ಲಾರಿಗಳ ಸಂಚಾರ ಮುಂದುವರಿಕೆಗೆ ಅವಕಾಶ ನೀಡಿರಲಿಲ್ಲ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಶಿರಾಡಿ ಘಾಟಿ ಹೆದ್ದಾರಿಯಲ್ಲಿ ನಾಳೆಯಿಂದ (ನ.15) ಎಲ್ಲಾ ರೀತಿಯ ಘನ ವಾಹನಗಳಿಗೆ ಸಂಚಾರ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಶಿರಾಡಿ ಘಾಟಿ ರಸ್ತೆಯಲ್ಲಿ ಘನ ವಾಹನಗಳ ಸಂಚಾರದಿಂದ ರಸ್ತೆ ಕ್ಷಮತೆ ಹಾಗೂ ಸುರಕ್ಷತೆ ಬಗ್ಗೆ ಈಗಾಗಲೇ ದ.ಕ. ಹಾಗೂ ಹಾಸನ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗಿದ್ದು, ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟಿ ರಸ್ತೆ ಸದೃಢವಾಗಿದೆ ಎಂದು ತಿಳಿಸಿದ್ದಾರೆ.