Connect with us

FILM

ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ವಂಚನೆ: ನಿಶಾ ವಿರುದ್ಧ 30 ಮಂದಿ ದೂರು

Share Information

ಬೆಂಗಳೂರು, ಜುಲೈ 17: ಮಾಸ್ಟರ್ ಆನಂದ್ ಅವರ ಪತ್ನಿ ಹಾಗೂ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿ ನಿಶಾ ನರಸಪ್ಪ ವಿರುದ್ಧ 30 ಜನರು ದೂರು ನೀಡಿದ್ದು, ಸುಮಾರು ₹20 ಲಕ್ಷದಿಂದ ₹30 ಲಕ್ಷ ವಂಚನೆಯಾಗಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

‘ಎನ್‌.ಎನ್‌. ಪ್ರೊಡಕ್ಷನ್ಸ್ ಸ್ಥಾಪಿಸಿದ್ದ ನಿಶಾ ಅವರು ಜಾಹೀರಾತು ಹಾಗೂ ಫೋಟೊಶೂಟ್ ಹೆಸರಿನಲ್ಲಿ ಜನರಿಂದ ಹಣ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಆನಂದ್ ಪತ್ನಿ ಯಶಸ್ವಿನಿ ಅವರು ಇತ್ತೀಚೆಗೆ ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ನಿಶಾ ಅವರನ್ನು ಬಂಧಿಸಿದ್ದರು. ಸದ್ಯ ನಿಶಾ ನ್ಯಾಯಾಂಗ ಬಂಧನದಲ್ಲಿದ್ದಾರೆ.

‘ಆರೋಪಿ ನಿಶಾ, ನಾಲ್ವರು ಪೋಷಕರಿಂದ ಹಣ ಪಡೆದಿದ್ದ ಮಾಹಿತಿ ಆರಂಭದಲ್ಲಿ ಗೊತ್ತಾಗಿತ್ತು. ಬಂಧನದ ನಂತರ ಮತ್ತಷ್ಟು ಮಂದಿ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ. ಇದುವರೆಗೂ 30 ಮಂದಿ ದೂರು ನೀಡಿದ್ದಾರೆ. ಈಗಾಗಲೇ ಒಂದು ಎಫ್‌ಐಆರ್ ದಾಖಲಾಗಿದೆ. ಹೀಗಾಗಿ, 30 ಮಂದಿಯನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಲಾಗುವುದು’ ಎಂದು ಪೊಲೀಸರು ಹೇಳಿದರು.

‘ತಮ್ಮ ಮಕ್ಕಳಿಗೆ ರಿಯಾಲಿಟಿ ಶೋ, ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಕೊಡಿಸಬೇಕೆಂದು ಪೋಷಕರು ನಿಶಾರನ್ನು ಸಂಪರ್ಕಿಸುತ್ತಿದ್ದರು. ಆದರೆ, ಆರೋಪಿ ಫೋಟೊಶೂಟ್ ಹೆಸರಿನಲ್ಲಿ ಹಣ ಪಡೆದು ವಂಚಿಸುತ್ತಿದ್ದರು. ಇತ್ತೀಚೆಗೆ ಆರೋಪಿ ಕೃತ್ಯ ಯಶಸ್ವಿನಿ ಅವರ ಗಮನಕ್ಕೆ ಬಂದಿತ್ತು. ಅವರೇ ಠಾಣೆಗೆ ಬಂದು ದೂರು ನೀಡಿದ್ದರು’ ಎಂದರು.

‘ಯಶಸ್ವಿನಿ, ಅವರ ಮಗಳು ವಂಶಿಕಾ ಹಾಗೂ ಇತರರ ಹೆಸರಿನಲ್ಲಿ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಸಿನಿಮಾ ನಟರು ಹಾಗೂ ಇತರೆ ಪ್ರಮುಖರ ಹೆಸರಿನಲ್ಲಿ ವಂಚಿಸಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಅಗತ್ಯಬಿದ್ದರೆ, ನ್ಯಾಯಾಂಗ ಬಂಧನದಲ್ಲಿರುವ ನಿಶಾ ಅವರನ್ನು ಕಸ್ಟಡಿಗೆ ಪಡೆದು ಪುನಃ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.


Share Information
Advertisement
Click to comment

You must be logged in to post a comment Login

Leave a Reply