LATEST NEWS
ವಿದ್ಯುತ್ ಸ್ಪರ್ಶದಿಂದ ಒಬ್ಬರನ್ನ ಉಳಿಸಲು ಹೋಗಿ ನಾಲ್ವರು ಮಕ್ಕಳ ಸಾವು: ವಿಷ ಸೇವಿಸಿದ ತಂದೆ
ಉತ್ತರ ಪ್ರದೇಶ : ಕಣ್ಣ ಎದುರೇ ವಿದ್ಯುತ್ ಸ್ಪರ್ಶದಿಂದ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆಯಿಂದ ನೊಂದು ತಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.
ವಿದ್ಯುತ್ ಅವಘಡದಲ್ಲಿ ಒಬ್ಬರ ರಕ್ಷಣೆ ಮಾಡಲು ಹೋದ ಮೂವರು ಸೇರಿ ಒಟ್ಟು ನಾಲ್ವರು ಪುಟ್ಟ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಮನನೊಂದ ತಂದೆ ಕೀಟನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತನನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಸೇರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವೀರೇಂದ್ರ ಅವರ ಮನೆಯಲ್ಲಿ ಹಳೆಯ ಟೇಬಲ್ ಫ್ಯಾನ್ ಇದೆ. ಭಾನುವಾರ ಸಂಜೆ ಫ್ಯಾನ್ ಬಳಿಯೇ ನಾಲ್ವರು ಮಕ್ಕಳು ಕೂಡ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಒಂದು ಮಗು ಫ್ಯಾನ್ ಅನ್ನು ಆಕಸ್ಮಿಕವಾಗಿ ಮುಟ್ಟಿದೆ. ಇದರಿಂದ ಫ್ಯಾನ್ನಿಂದ ವಿದ್ಯುತ್ ಪ್ರವಹಿಸಿ ಆ ಮಗು ಕೂಗಲು ಆರಂಭಿಸಿದೆ. ಇದರಿಂದ ಉಳಿದ ಸಹೋದರರು ಮತ್ತು ಸಹೋದರಿಯರು ಮಗುವನ್ನು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಈ ಮೂವರಿಗೂ ವಿದ್ಯುತ್ ಸ್ಪರ್ಶಿಸಿದೆ. ಪರಿಣಾಮವಾಗಿ ನಾಲ್ವರು ಮಕ್ಕಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ವೀರೇಂದ್ರ ಕುಮಾರ್ ಎಂಬುವರ ಮಕ್ಕಳಾದ 9 ವರ್ಷದ ಮಗ, 8 ವರ್ಷದ ಮಗಳು, 6 ವರ್ಷದ ಮಗ ಹಾಗೂ 4 ವರ್ಷದ ಮಗಳು ಮೃತರು ಎಂದು ಗುರುತಿಸಲಾಗಿದೆ.
ಮಕ್ಕಳ ಸಾವಿನಿಂದ ಕುಗ್ಗಿ ಹೋದ ವೀರೇಂದ್ರ ಇಂದು ಬೆಳಗ್ಗೆ ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಇದರಿಂದ ಆರೋಗ್ಯ ಹದಗೆಟ್ಟಿದ್ದು, ವಾಂತಿ ಮಾಡಿಕೊಳ್ಳಲು ಆರಂಭಿಸಿದೆ. ಇದನ್ನು ಕಂಡ ಕುಟುಂಬಸ್ಥರು ಗಾಬರಿಯಿಂದ ಅವರನ್ನು ಉನ್ನಾವೋ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ನಂತರ ವೀರೇಂದ್ರ ಚೇತರಿಸಿಕೊಂಡಿದ್ದಾರೆ.
ಇಲ್ಲಿನ ಬಾರ್ಸ್‌ಗವಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login