DAKSHINA KANNADA
ಅರಣ್ಯ ರಕ್ಷಿಸಲು ದೂರು ನೀಡಿದರೆ ನಿಮ್ಮ ಮನೆಗೆ ಮಧ್ಯರಾತ್ರಿಯೇ ದಾಳಿ ನಡೆಸಲಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು…!!
ಪುತ್ತೂರು ಮಾರ್ಚ್ 3: ಅರಣ್ಯ ರಕ್ಷಿಸಲು ಹೊರಟ ವ್ಯಕ್ತಿಯ ಮನೆಗೇ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಎಂಬಲ್ಲಿ ನಡೆದಿದೆ.
ಬಿಳಿನೆಲೆ ರಕ್ಷಿತಾರಣ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮರಗಳನ್ನು ಕಡಿದು ಸಾಗಾಟ ನಡೆಸಲಾಗುತ್ತಿದೆ ಎಂದು ಐತೂರು ನಿವಾಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಈ ಮರ ಸಾಗಾಟದ ಹಿಂದೆ ಅರಣ್ಯ ಇಲಾಖೆಯ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಅವರು ಆರೋಪಿಸಿದ್ದರು. ಈ ನಡುವೆ ಇದೀಗ ಏಕಾಏಕಿ ದೂರುದಾರ ವ್ಯಕ್ತಿಯ ಮನೆಗೆ ದಾಳಿ ನಡೆಸಲಾಗಿದ್ದು, ಮನೆಯ ಮೇಲ್ಫಾವಣಿಗೆ 30 ವರ್ಷದ ಹಿಂದೆ ಹಾಕಲಾಗಿದ್ದ ಮರದ ಹಲಗೆಗಳನ್ನು ಸೀಜ್ ಮಾಡುವ ನಾಟಕ ಮಾಡಲಾಗಿದೆ.
ಅಧಿಕಾರಿಗಳ ವಿರುದ್ಧ ದೂರು ನೀಡಿದಲ್ಲಿ ದೂರುದಾರನಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವಂತಹ ಘಟನೆಯೊಂದು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪ್ರಸಾದ್ ಎಂಬುವವರು ತಿಂಗಳ ಹಿಂದೆ ಬಿಳಿನೆಲೆ ರಕ್ಷಿತಾರಣ್ಯದಿಂದ ಸಾವಿರಾರು ಸಂಖ್ಯೆಯ ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿದ್ದರು. ಈ ಸಂಬಂಧ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಧ್ಯಮಗಳು ಈ ವರದಿಯನ್ನೂ ಮಾಡಿದ್ದವು. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಅರಣ್ಯ ಸಂಚಾರಿ ದಳದ ರೇಂಜರ್ ಆಗಿರುವ ಸಂಧ್ಯಾ ಸುನಿಲ್ ಎನ್ನುವ ಅಧಿಕಾರಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದರು. ಅಲ್ಲದೆ ತನ್ನ ಅನುಮತಿಯಿಲ್ಲದೆ ಅರಣ್ಯದೊಳಗೆ ಪ್ರವೇಶಿಸಿದ ಮಾಧ್ಯಮಗಳ ಮೇಲೆ ಪ್ರಕರಣ ದಾಖಲಿಸುವ ಬೆದರಿಕೆಯನ್ನೂ ಒಡ್ಡಿದ್ದರು. ಆ ಬಳಿಕ ಮಾರ್ಚ್ 2 ರ ಮಧ್ಯರಾತ್ರಿ 1.30 ಸುಮಾರಿಗೆ ಅರಣ್ಯ ಅಧಿಕಾರಿ ಸಂಧ್ಯಾ ಹಾಗೂ ತಂಡ ದೂರುದಾರ ಪ್ರಸಾದ್ ಮನೆಗೆ ದಾಳಿ ಮಾಡಿದೆ. ಪ್ರಸಾದ್ ಮನೆಯಿಲ್ಲಿಲ್ಲದ ಸಂದರ್ಭದಲ್ಲಿ ದಾಳಿ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಮನೆಯಲ್ಲಿ ದಾಂದಲೆ ನಡೆಸಿದೆ.
ಮನೆಯಲ್ಲಿದ್ದ ಪ್ರಸಾದ್ ಪತ್ನಿ, ಮಗು ಹಾಗೂ ವೃದ್ಧ ತಂದೆ-ತಾಯಿಗೆ ಬೆದರಿಕೆ ಹಾಕಿದ್ದಲ್ಲದೆ, ಮಾಧ್ಯಮಗಳಿಗೆ ಮಾಹಿತಿ ನೀಡುವ ಮೂಲಕ ಸರಿಯಾಗಿ ನಿದ್ದೆ ಮಾಡಲೂ ಬಿಡುತ್ತಿಲ್ಲ ಎಂದು ರೇಗಾಡಿದ್ದಾರೆ. ಇಡೀ ಮನೆಯನ್ನು ಜಾಲಾಡಿದ ಸುಮಾರು 10-15 ಜನರಿದ್ದ ತಂಡ 30 ವರ್ಷಗಳ ಹಿಂದೆ ಪ್ರಸಾದ್ ತಂದೆ ಮನೆ ಕಟ್ಟುವ ಸಂದರ್ಭದಲ್ಲಿ ಮನೆಯ ಮೇಲ್ಫಾವಣಿಗೆ ಹಾಕಿದ್ದ ಹಲಸಿನ ಹಲಗೆಯನ್ನು ತೆಗೆದುಕೊಂಡು ಹೋಗಿದೆ. ಅಲ್ಲದೆ ಸಾಮಾನ್ಯವಾಗಿ ಕೃಷಿಕರ ಮನೆಯಲ್ಲಿ ಇರುವಂತಹ ಮರ ತುಂಡರಿಸುವ ಸಣ್ಣ ಯಂತ್ರವನ್ನೂ ವಶಕ್ಕೆ ಪಡೆದುಕೊಂಡಿದೆ. ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರಸಾದ್ ವಿರುದ್ಧ ತಮ್ಮ ಹಗೆಯನ್ನು ಹೊರಹಾಕುತ್ತಿರುವುದು ದಾಳಿಯ ವಿಡಿಯೋದಲ್ಲಿ ಸೆರೆಯಾಗಿದೆ. ಅರಣ್ಯದಲ್ಲಿ ಮರ ಕಳ್ಳತನವಾಗುತ್ತಿರುವ ಬಗ್ಗೆ ಮಾದ್ಯಮಗಳಿಗೆ ಮಾಹಿತಿ ನೀಡಿದ್ದ ವ್ಯಕ್ತಿಯನ್ನೇ ಮರದ ಕಳ್ಳತನದಲ್ಲಿ ಸಿಲುಕಿಸುವ ಯತ್ನ ಈ ದಾಳಿಯ ಹಿಂದಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ದಕ್ಷಿಣಕನ್ನಡ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಮರಗಳ ಸಾಗಾಟ ನಡೆಯುತ್ತಿದ್ದ, ಈ ಎಲ್ಲಾ ಅಕ್ರಮಗಳ ಹಿಂದೆ ಅರಣ್ಯ ಇಲಾಖೆಯ ಕೈವಾಡವಿದೆ ಎನ್ನುವ ಆರೋಪವೂ ಇದೆ. ಇದೀಗ ಈ ಆರೋಪಕ್ಕೆ ಪೂರಕವೆಂಬಂತೆ ಮರ ಸಾಗಾಟದ ವಿಷಯವನ್ನು ಮಾದ್ಯಮಗಳಿಗೆ ನೀಡಿದ ವ್ಯಕ್ತಿಯ ವಿರುದ್ಧವೇ ಅರಣ್ಯ ಇಲಾಖೆ ಹಗೆ ಸಾಧಿಸುವ ಕೆಲಸಕ್ಕೆ ಮುಂದಾಗಿದೆ. ಅರಣ್ಯದೊಳಗೆ ನಡೆಯುತ್ತಿರುವ ಅಕ್ರಮವನ್ನು ನೋಡಿಯೂ ಕಣ್ಣು ಮುಚ್ಚಿ ಕುಳಿತುಕೊಳ್ಳಬೇಕು ಎನ್ನುವ ಎಚ್ಚರಿಕೆಯನ್ನೂ ಅರಣ್ಯ ಇಲಾಖೆ ಈ ದಾಳಿಯ ಮೂಲಕ ನೀಡಿದೆ ಎನ್ನುವುದು ಬಿಳಿನೆಲೆ ಅರಣ್ಯ ಭಾಗದಲ್ಲಿ ನೆಲೆಸಿರುವ ಸ್ಥಳೀಯರ ಆರೋಪವೂ ಆಗಿದೆ.