Connect with us

UDUPI

ಬೀದಿ ನಾಯಿಗಳಿಗೆ 120 ದಿನಗಳಿಂದ ಅನ್ನದಾತೆಯಾದ ಮೋನಿಶಾ ಗೇಬ್ರಿಯಲ್

ಉಡುಪಿ ಜುಲೈ 28: ಲಾಕ್‌ಡೌನ್‌ ಹಾಗೂ ಕೊರೊನಾ ಸಾಂಕ್ರಮಿಕ ರೋಗದಿಂದ ಸಂಕಷ್ಟಕ್ಕೀಡಾದ ಜನರ ಕಷ್ಟವನ್ನೇ ಕೇಳೋರಿಲ್ಲ. ಇಂತಹಾ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವನ್ನು ತಣಿಸಿ‌ ನಿಜ‌ ಮಾನವೀಯತೆ ಮೆರೆಯುತ್ತಿದ್ದಾರೆ ಕುಂದಾಪುರದ ಹಂಗ್ಳೂರಿನ ಹುಡುಗಿ ಮೋನಿಶಾ ಗೇಬ್ರಿಯಲ್.


ಲಾಕ್ ಡೌನ್ ಆದಾಗ ಇವರ ಸೇವೆ ಆರಂಭವಾಗಿದೆ. ಬೀದಿಯಲ್ಲಿ ಅಡ್ಡಾಡುವ ನಾಯಿಗಳು ಹೋಟೇಲ್ ಗಳು ಮುಚ್ಚಿದ ನಂತ್ರ ಆಹಾರಕ್ಕೆ ಸಂಕಟ ಪಡುತ್ತಿದ್ದವು. ಅದರಲ್ಲೂ ಬೀದಿನಾಯಿಗಳು ಹಸಿವೆಯಲ್ಲೇ ಸಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು, ಈ ಪರಿಸ್ಥಿತಿ ನೋಡಲಾಗದೆ ಲಾಕ್‌ಡೌನ್ ಆರಂಭವಾದಾಗಿನಿಂದ ಕಳೆದ ಸುಮಾರು 120 ದಿವಸದಿಂದ ನಿರಂತರವಾಗಿ ತಮ್ಮ ಸ್ಥಳೀಯ ಪ್ರದೇಶದಲ್ಲಿ ನಾಯಿಗೆ ರುಚಿಕರ ಹಾಗೂ ಶುದ್ದ ಆಹಾರವನ್ನು ನೀಡುತ್ತಾ ಬಂದಿದ್ದಾರೆ ಮೋನಿಶಾ.

ಇವರ ಈ ಸೇವೆಗೆ ಅವರ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಕೂಡ ಕೈ ಜೋಡಿಸಿದ್ದಾರೆ. ಇಂಗ್ಲೆಂಡಿನ ಲ್ಯಾಂಕಸ್ಟರ್ ಯುನಿವರ್ಸಿಟಿಯಲ್ಲಿ ವಕೀಲ ಪದವಿ ಪಡೆದಿರುವ ಈಕೆ, ಮುಂದೆ ತಮ್ಮ ಊರಲ್ಲಿ ಹೊಸ ಉದ್ಯಮ ಪ್ರಾರಂಭ ಮಾಡುವ ಯೋಚನೆಯಲ್ಲೂ ಇದ್ದಾರೆ.

ಸಾಕು ಪ್ರಾಣಿಗಳ ರಕ್ಷಣೆಗಾಗಿ ಒಂದು ಎನ್‌ಜಿಓ ಆರಂಭಿಸಿ, ಬೀದಿ ನಾಯಿಗಳನ್ನು ರಕ್ಷಣೆ ಮಾಡಲು ಸ್ಥಳಿಯ ಜಾಗದಲ್ಲಿ ಒಂದು ಆರೈಕೆ ಮಾಡುವ ಕೇಂದ್ರವೊಂದನ್ನು ವ್ಯವಸ್ಥೆ ಮಾಡಬೇಕು ಎನ್ನುವ ಕನಸು ಇವರದ್ದು .ಪ್ರತಿದಿನ ಬೆಳಗ್ಗೆ ಏಳು ಗಂಟೆಯಿಂದಲೇ ಪ್ರಾಣಿಗೆ ಅನ್ನ ಬೇಯಿಸುವ ಕೆಲಸ ಪ್ರಾರಂಭ ಮಾಡುತ್ತಾರೆ. ಮೊನಿಶಾ ಅವರ ತಂದೆ-ತಾಯಿಯೂ ಕೂಡ ಸಹಕಾರ ಕೊಡುತ್ತಾರಂತೆ. ಪ್ರತಿದಿನ ಬೇರೆ ಬೇರೆ ಆಹಾರ ಪದಾರ್ಥದೊಂದಿಗೆ, ಕೋಳಿ ಮಾಂಸ ವನ್ನು ಆಹಾರವಾಗಿ ಬೀದಿ ನಾಯಿಗಳಿಗೆ ನೀಡಲಾಗುತ್ತದೆ.


ನಾಯಿಗಳಿಗೆ ಬಡಿಸಲು ಹೊಸ ತಟ್ಟೆಗಳನ್ನು ಖರೀದಿಸಿ, ಊಟ ಆದಮೇಲೆ ಮನೆಗೆ ತಂದು ತಾವೇ ಶುಚಿಗೊಳಿಸುತ್ತಾರೆ. ಪ್ರತಿದಿನ ಬೀದಿ ನಾಯಿಗಳಿಗಾಗಿಯೇ 15 ಕಿಲೋದಷ್ಟು ಅನ್ನ ಬೇಯಿಸುತ್ತಾರೆ. ಮಳೆ ಬಂದಾಗಲೂ ಈ ಸೇವಾ ಕಾರ್ಯಕ್ಕೆ ವಿರಾಮ ನೀಡಲ್ಲ. ಇವರ ಸೇವೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಕೆಲವರು ಅಕ್ಕಿ, ಹಾಲು, ಆಹಾರ ಪದಾರ್ಥ ಬಿಸ್ಕತ್ತು ನೀಡಿ ಸಹಾಯ ಮಾಡಿದ್ದುಂಟು.

Facebook Comments

comments