LATEST NEWS
ಅರಸುಗುಡ್ಡೆ ಕೊಲೆ ಪ್ರಕರಣ- ಐವರ ಬಂಧನ

ಅರಸುಗುಡ್ಡೆ ಕೊಲೆ ಪ್ರಕರಣ- ಐವರ ಬಂಧನ
ಮಂಗಳೂರು, ಜೂನ್ 2, ಕಟೀಲು ಸಮೀಪದ ಎಕ್ಕಾರಿನ ಅರಸುಗುಡ್ಡೆ ಎಂಬಲ್ಲಿ ಮೇ 31ರಂದು ರಾತ್ರಿ ನಡೆದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಜ್ಪೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ದೀಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್ ಯಾನೆ ಪಚ್ಚು, ಮೋಕ್ಷಿತ್ ಮತ್ತು ಧನರಾಜ್ ಎಂಬವರು ಬಂಧಿತರು. ದೀಪೇಶ್, ಸುಹಾಸ್, ಗೌತಮ್, ಉಮಾನಾಥ ಮತ್ತು 3-4 ಜನರು ಸೇರಿ ಮಂಗಳೂರಿನ ಮರಕಡ ನಿವಾಸಿ ಕೀರ್ತನ್ (20) ಎಂಬಾತನನ್ನು ಕೊಲೆ ಮಾಡಿದ್ದರು.

ಹಣದ ವಿಚಾರದಲ್ಲಿ ಮಾತನಾಡಲೆಂದು ಕೀರ್ತನ್, ನಿತಿನ್ ಪೂಜಾರಿ, ಮನೀಶ್ ಜೋಗಿಯನ್ನು ದೀಪೇಶ್ ಮತ್ತು ತಂಡ ಬಜ್ಪೆ ಕರೆದಿದ್ದರು. ಅದರಂತೆ, ಎಕ್ಕಾರು ಬಳಿಯ ಅರಸುಗುಡ್ಡೆ ಎಂಬಲ್ಲಿಗೆ ತೆರಳಿದ್ದ ಕೀರ್ತನ್ ಮತ್ತು ದೀಪೇಶ್ ತಂಡಗಳ ನಡುವೆ ಜಗಳ ಆಗಿದೆ.
ಬಳಿಕ ಕೀರ್ತನ್ ಮತ್ತು ಆತನ ಜೊತೆಗಿದ್ದವರ ಮೇಲೆ ತಲವಾರಿನಲ್ಲಿ ಹಲ್ಲೆಗೈದಿದ್ದರು. ತೀವ್ರ ಗಾಯಗೊಂಡ ಕೀರ್ತನ್ ಅಂದು ರಾತ್ರಿಯೇ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರೆ, ನಿತಿನ್ ಮತ್ತು ಮನೀಶ್ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಗಳೂರಿನ ರೌಡಿನಿಗ್ರಹ ದಳ ಮತ್ತು ಬಜ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಲ್ಲದೆ, ಹತ್ಯೆಗೆ ಬಳಸಿದ ತಲವಾರು, ದೊಣ್ಣೆಗಳನ್ನು ಮತ್ತು ವಾಹನವನ್ನು ವಶಕ್ಕೆ ಪಡೆದಿದ್ದಾರೆ.