DAKSHINA KANNADA
ಮೀನುಗಾರರಿಗೆ ಕಾಂಗ್ರೆಸ್ ನಿಂದ ಮೋಸ: ಶಾಸಕ ವೇದವ್ಯಾಸ್ ಕಾಮತ್ ಆರೋಪ..!
ಚುನಾವಣಾ ಸಂದರ್ಭದಲ್ಲಿ ಮೀನುಗಾರರಿಗೆ ಹಲವು ಭರವಸೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದ ಬಳಿಕ ಅದ್ಯಾವುದನ್ನು ಈಡೇರಿಸದೆ ಮೀನುಗಾರರ ಸಮುದಾಯಕ್ಕೆ ಮೋಸ ಮಾಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಮಂಗಳೂರು : ಚುನಾವಣಾ ಸಂದರ್ಭದಲ್ಲಿ ಮೀನುಗಾರರಿಗೆ ಹಲವು ಭರವಸೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಈಗ ಅಧಿಕಾರಕ್ಕೆ ಬಂದ ಬಳಿಕ ಅದ್ಯಾವುದನ್ನು ಈಡೇರಿಸದೆ ಮೀನುಗಾರರ ಸಮುದಾಯಕ್ಕೆ ಮೋಸ ಮಾಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭ ಉಚ್ಚಿಲದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮೀನುಗಾರ ಸಮುದಾಯದವರ ಜೊತೆ ಸಂವಾದ ನಡೆಸಿ ಹಲವು ಭರವಸೆಗಳನ್ನು ನೀಡಿದ್ದರು.
ಆದರೆ ಪ್ರಸ್ತುತ ಅದ್ಯಾವುವುದನ್ನು ಈಡೇರಿಸದೆ ಇಡೀ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಅವರು ದೂರಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮೀನುಗಾರರಿಗೆ ಹತ್ತು ಲಕ್ಷ ರೂಪಾಯಿ ಜೀವ ವಿಮೆ, ಪ್ರತಿ ಲೀಟರಿಗೆ 25 ರೂಪಾಯಿ ಸಬ್ಸಿಡಿಯೊಂದಿಗೆ ದಿನಕ್ಕೆ 500 ಲೀಟರ್ ಡೀಸೆಲ್ ವಿತರಿಸುತ್ತೇವೆ ಎಂದು ಘೋಷಿದ್ದರು.
ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಇವೆಲ್ಲವನ್ನೂ ಮರೆತೆ ಬಿಟ್ಟಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸರಕಾರ ಅವಧಿಯಲ್ಲಿ ಕೃಷಿಕರ ಮಕ್ಕಳ ಜತೆಯಲ್ಲಿ ಮೀನುಗಾರ ಸಮುದಾಯದ ಮಕ್ಕಳಿಗೂ ವಿದ್ಯಾಸಿರಿ ಯೋಜನೆಯನ್ನು ಘೋಷಿಸಲಾಗಿತ್ತು.
ಆದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಈ ಯೋಜನೆಯನ್ನೇ ಕೈಬಿಟ್ಟು ಕೃಷಿಕರು ಮತ್ತು ಮೀನುಗಾರರನ್ನು ಸಂಪೂರ್ಣ ಕಡೆಗಣಿಸಿದ್ದಾರೆ.
ಅಲ್ಲದೆ ಮೀನುಗಾರಿಕಾ ಸಮುದಾಯಕ್ಕೆ ಯಡಿಯೂರಪ್ಪ ಅವರ ಸರಕಾರದ ಅವಧಿಯಲ್ಲಿ 50,000 ರೂ. ವರೆಗೆ ಸಾಲ ಮನ್ನಾ ಘೋಷಿಸಲಾಗಿತ್ತು.
ಈಗಿನ ಸಿದ್ದರಾಮಯ್ಯ ಸರಕಾರ ವೋಟ್ ಬ್ಯಾಂಕ್ ರಾಜಕೀಯಕ್ಕೋಸ್ಕರ ಪ್ರಮುಖ ಸಮುದಾಯಕ್ಕೆ ಯಾವುದೇ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ ಎಂದು ಶಾಸಕ ಕಾಮತ್ ಆರೋಪಿಸಿದ್ದಾರೆ.