LATEST NEWS
ಮೀನುಗಾರಿಕಾ ಬೋಟ್ ದುರಂತ – ಇನ್ನೂ ಪತ್ತೆಯಾಗದ 9 ಮಂದಿ ಮೀನುಗಾರರು

ಮಂಗಳೂರು ಎಪ್ರಿಲ್ 16: ಆಳಸಮುದ್ರದಲ್ಲಿ ಹಡಗೊಂದಕ್ಕೆ ಡಿಕ್ಕಿಯಾಗಿ ದುರಂತಕ್ಕೀಡಾಗಿದ್ದ ಕೇರಳ ಮೂಲದ ಮೀನುಗಾರಿಕೆ ಬೋಟ್ ನಲ್ಲಿದ್ದ ಮೀನುಗಾರರ ಶೋಧ ಕಾರ್ಯ ಇನ್ನು ಮುಂದುವರೆದಿದೆ.
ಕರಾವಳಿ ಕಾವಲು ಪೊಲೀಸ್ ಪಡೆ, ಕಾರವಾರ ನೌಕಾನೆಲೆ ಹಡಗು ಮತ್ತು ಹೆಲಿಕಾಪ್ಟರ್ ಮೂಲಕ ಗುರುವಾರ ಶೋಧ ನಡೆಸಲಾಗಿದೆ. ವಿಶೇಷವಾಗಿ ಕೇರಳದಿಂದ ಬಂದ ನಾಲ್ಕು ಬೋಟ್‌ಗಳು, ಮಂಗಳೂರಿನ ಮೀನುಗಾರಿಕೆ ಬೋಟ್‌ಗಳು ಕೂಡ ಶೋಧ ಮಾಡಿದೆ. ಆದರೆ ಇಷ್ಟೆಲ್ಲ ಶೋಧದ ಬಳಿಕವೂ ನಾಪತ್ತೆಯಾದ ಒಂಬತ್ತು ಮೀನುಗಾರರ ಪತ್ತೆಯಾಗಿಲ್ಲ.

ಕರಾವಳಿ ಕಾವಲು ಪೊಲೀಸ್ ಪಡೆಯ ಮಾಹಿತಿಯಂತೆ ಈಗಾಗಲೇ ಮುಳುಗು ತಜ್ಞರ ಮೂಲಕ ದುರಂತಕ್ಕೀಡಾದ ಬೋಟ್‌ನ ಕ್ಯಾಬಿನ್ ಒಳ ಭಾಗಕ್ಕೆ ಹೋಗಿ ನೋಡಿಕೊಂಡು ಬರಲಾಗಿದೆ. ಆದರೆ ಅಲ್ಲಿ ಯಾವುದೇ ಮೀನುಗಾರರು ಪತ್ತೆಯಾಗಿಲ್ಲ. ಡಿಕ್ಕಿಯಾದ ಬಳಿಕ ಈ ಬೋಟು ತೇಲುತ್ತಿತ್ತು. ಆದರೆ ಬುಧವಾರದಂದು ಅದು ಪೂರ್ಣರೂಪದಲ್ಲಿ ಮುಳುಗಿದೆ. ಇದರಿಂದ ಮೀನುಗಾರರ ಹುಡುಕಾಟ ಮತ್ತಷ್ಟು ಕಷ್ಟವಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ.
ಈಗಾಗಲೇ ಈ ಬೋಟ್‌ನಲ್ಲಿದ್ದ ಮೂವರ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಇಬ್ಬರ ಮೃತದೇಹವನ್ನು ಮಂಗಳೂರಿನ ವೆನ್ಲಾಕ್‌ನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಂಗಳವಾರವೇ ತಮಿಳುನಾಡಿಗೆ ಕಳುಹಿಸಿಕೊಡಲಾಗಿತ್ತು. ಆದರೆ ಮತ್ತೊಂದು ಮೃತದೇಹವನ್ನು ಬುಧವಾರ ಬೆಂಗಳೂರು ಮೂಲಕ ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡಲಾಗಿದೆ.