KARNATAKA
ನಾಗಮಂಗಲ ಗಲಭೆ ಪ್ರಕರಣದಲ್ಲಿ ಮೊದಲ ವಿಕೆಟ್ ಪತನ,ಇನ್ಸ್‌ಪೆಕ್ಟರ್ ಸಸ್ಪೆಂಡ್,ಸ್ಥಳಕ್ಕೆ ಭೇಟಿ ನೀಡಿದ HDK
ಬೆಂಗಳೂರು : ನಾಗಮಂಗಲ ಗಲಭೆ (Nagamangala Violence) ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಡಿ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ದಕ್ಷಿಣ ವಲಯ ಡಿಐಜಿಪಿ ಬೋರಲಿಂಗಯ್ಯ ಅವರು ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಅಮಾನತು ಮಾಡಿ ಆದೇಶ ಪ್ರಕಟಿಸಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲುತೂರಾಟ ನಡೆದು ನಾಗಮಂಗಲ ಪಟ್ಟಣ ಹೊತ್ತಿ ಉರಿದಿತ್ತು. ಈ ಸಂದರ್ಭ ಕರ್ತವ್ಯ ಲೋಪ, ನಿರ್ಲಕ್ಷತನ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಇನ್ನೂ ಗಣೇಶ ವಿಸರ್ಜನೆ ವೇಳೆ ನಡೆದ ಗಲಭೆಯಿಂದ ನಾಗಮಂಗಲ ಸಹಜ ಸ್ಥಿತಿಗೆ ಮರಳಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ನಾಗಮಂಗಲದ ನೆಮ್ಮದಿ ಕೆಡಿಸಿದ 150 ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 52 ಜನರನ್ನ ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ತಲೆಮರೆಸಿಕೊಂಡ 97 ಗಲಭೆಕೋರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಗಲಭೆ ನಡೆದ ಸ್ಥಳಕ್ಕೆ HDK ಭೇಟಿ :
ಕೇಂದ್ರ ಬೃಹತ್ ಕೈಗಾರಿಕಾ ಸಚಿವ, ಮಂಡ್ಯ ಸಂಸದ ಕುಮಾರಸ್ವಾಮಿ (HD Kumaraswamy) ಅವರು ಇಂದು ಬೆಳಗ್ಗೆ ನಾಗಮಂಗಲಕ್ಕೆ (Nagamangala) ಭೇಟಿ ನೀಡಿದರು. ಗಲಭೆಯಿಂದ (Nagamangala Violence) ಹಾನಿಗೊಳಗಾದ ಅಂಗಡಿಗಳಿಗೆ ಭೇಟಿ ನೀಡಿದ ಹೆಚ್‌ಡಿಕೆ ಅಂಗಡಿ ಮಾಲೀಕರ ಅಳಲು ಆಲಿಸಿದರು. ಭೇಟಿ ವೇಳೆ ಹೆಚ್‌ಡಿಕೆಗೆ ಮಾಜಿ ಶಾಸಕರಾದ ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಅನ್ನದಾನಿ ಸಾಥ್ ನೀಡಿದರು.
You must be logged in to post a comment Login