LATEST NEWS
ದೇಶದ ಇತಿಹಾಸದಲ್ಲೇ ಪ್ರಥಮ,’ಸುಪ್ರೀಂ’ ನ್ಯಾಯಮೂರ್ತಿಗಳಿಂದ ಸುದ್ದಿಗೋಷ್ಠಿ: ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ
ದೇಶದ ಇತಿಹಾಸದಲ್ಲೇ ಪ್ರಥಮ,’ಸುಪ್ರೀಂ’ ನ್ಯಾಯಮೂರ್ತಿಗಳಿಂದ ಸುದ್ದಿಗೋಷ್ಠಿ: ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಸಮಾಧಾನ
ನವದೆಹಲಿ,ಜನವರಿ 12 :ಭಾರತದ ಇತಿಹಾಸದಲ್ಲಿದೇ ಇದೇ ಮೊದಲ ಬಾರಿಗೆ ‘ಸುಪ್ರೀಂ ಕೋರ್ಟ್’ ನ್ಯಾಯಮೂರ್ತಿಗಳು ವ್ಯವಸ್ಥೆಯ ವಿರುದ್ದ ಸಿಡಿದೆದ್ದು ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚೆಲ್ಮೇಶ್ವರ್ ಅವರು ದೆಹಲಿಯ ತಮ್ಮ ನಿವಾಸದ ಆವರಣದಲ್ಲಿಯೇ ಸುದ್ದಿ ಗೋಷ್ಟಿ ನಡೆಸಿ ನ್ಯಾಯಾಂಗ ವ್ಯವಸ್ಥೆ ಹಾಗೂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನ್ಯಾಯಾಲಯದ ಕೆಲಸ ಕಾರ್ಯಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿ ನ್ಯಾಯಮೂರ್ತಿಗಳಾದ ಚೆಲ್ಮೇಶ್ವರ್, ರಂಜನ್ ಗೊಗೋಯಿ, ಮದನ್ ಲೋಕೂರ್ ಹಾಗೂ ಕುರಿಯನ್ ಜೋಸೆಫ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸುದ್ದಿಗೋಷ್ಠಿ ನಡೆಸಿದ ಈ ನಾಲ್ವರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ಕೊಲಾಜಿಯಂ ಸದಸ್ಯರಾಗಿದ್ದಾರೆ.
ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಧೀಶರು ಸುದ್ದಿಗೋಷ್ಠಿ ನಡೆಸಿ ನ್ಯಾಯಾಂಗದ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲ ಎಂದು ಆರೋಪಿಸಿದ್ದಾರೆ. ಈ ರೀತಿ ಸುದ್ದಿಗೋಷ್ಠಿ ನಡೆಸಲು ನಮಗೇನೂ ಖುಷಿ ಅನಿಸುವುದಿಲ್ಲ.
ಆದರೆ ನಡೆಸಲೇ ಬೇಕಾದ ಅನಿವಾರ್ಯತೆ ಬಂದೊದಗಿದೆ. ತಮಗೆ ಅಸಮಾಧಾನವಾಗಿದೆ ಎಂದು ಹೇಳಿ ನಾವು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಸಹಿ ಹಾಕಿ ಕೊಟ್ಟಿದ್ದೇವೆ.
ನಾವು ಹಲವಾರು ಬಾರಿ ಮುಖ್ಯ ನ್ಯಾಯಾಧೀಶರನ್ನು ಮುಖತಃ ಭೇಟಿ ಮಾಡಿದ್ದೇವೆ. ಇಂದೂ ಕೂಡಾ ಭೇಟಿ ಮಾಡಿದ್ದೆವು, ಆದರೆ ನಮ್ಮ ಪ್ರಯತ್ನಗಳೆಲ್ಲವೂ ವಿಫಲವಾಗಿದೆ.
ನ್ಯಾಯಾಂಗ ವ್ಯವಸ್ಥೆ ಬಗ್ಗೆ ನಾವೇನೂ ಕಾಳಜಿ ವಹಿಸಿಲ್ಲ ಎಂದು 20 ವರ್ಷಗಳು ಕಳೆದ ನಂತರ ಜನರು ಮಾತನಾಡಿಕೊಳ್ಳುವಂತೆ ಆಗಬಾರದು.
ಹಾಗಾಗಿ ನಾವು ಜನರ ಮುಂದೆ ಬರುವುದು ಬಿಟ್ಟರೆ ನಮ್ಮಲ್ಲಿ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ ಎಂದಿದ್ದಾರೆ ಚೆಲಮೇಶ್ವರ್.
ಆದಾಗ್ಯೂ, ವಿಶೇಷ ಸಿಬಿಐ ನ್ಯಾಯಾಧೀಶ ಬಿಹೆಚ್ ಲೋಯಾ ಸಾವು ಪ್ರಕರಣದ ಬಗ್ಗೆ ಹೇಳುತ್ತಿದ್ದೀರಾ ಎಂದು ಹೇಳಿದ್ದಾಗ ನ್ಯಾಯಮೂರ್ತಿ ಗೊಗೋಯಿ ಹೌದು ಎಂದಿದ್ದಾರೆ.
ಏನಿದು ಲೋಯಾ ಪ್ರಕರಣ?
ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬ್ರಿಜ್‌ಗೋಪಾಲ್ ಹರ್‌ಕಿಶನ್ ಲೋಯಾ 2014ರಲ್ಲಿ ನಾಗಪುರದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.
2005ರಲ್ಲಿ ನಡೆದ ಸೊಹ್ರಾಬುದ್ದೀನ್ ಶೇಖ್ ಮತ್ತು ತುಳಸಿರಾಂ ಪ್ರಜಾಪತಿ ನಕಲಿ ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಗುಜರಾತ್‌ನ ಅಂದಿನ ಗೃಹ ಸಚಿವರಾಗಿದ್ದ ಅಮಿತ್ ಷಾ ವಿರುದ್ಧ ಸಿಬಿಐ ದೂರು ದಾಖಲಿಸಿತ್ತು.
ಲೋಯಾ ಅವರ ಸಾವಿನ ವೇಳೆಗೆ ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿದ್ದರು.
ಷಾ ವಿರುದ್ಧದ ಆರೋಪಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದ್ದ ಸಿಬಿಐ ವಿಶೇಷ ನ್ಯಾಯಾಲಯವು 2014ರ ಡಿಸೆಂಬರ್ 30ರಂದು ಷಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
‘ಸೊಹ್ರಾಬುದ್ದೀನ್ ಎನ್‌ಕೌಂಟರ್ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನಿಂದ ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು.
ಒಬ್ಬರೇ ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆಯನ್ನು ಪೂರ್ಣಗೊಳಿಸಬೇಕು’ ಎಂದು ಸುಪ್ರೀಂಕೋರ್ಟ್ 2012ರಲ್ಲಿ ಆದೇಶಿಸಿತ್ತು.
ಆದರೆ, ಪ್ರಕರಣದ ಮೊದಲ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಟಿ. ಉತ್ಪತ್ 2014ರ ಮಧ್ಯದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ವರ್ಗಾವಣೆಯಾಗಿದ್ದರು. ಅವರ ಸ್ಥಾನಕ್ಕೆ ಲೋಯಾ ಬಂದಿದ್ದರು.
2014ರ ಜೂನ್ 6ರಂದು ನಡೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕೆಂಬ ಅಮಿತ್ ಷಾ ಮನವಿಯನ್ನು ನ್ಯಾಯಾಧೀಶ ಜೆ.ಟಿ. ಉತ್ಪತ್ ತಳ್ಳಿಹಾಕಿದ್ದರು.
ನಂತರದ ವಿಚಾರಣೆ ನಡೆದ ಜೂನ್ 20ರಂದು ಅಮಿತ್ ಷಾ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನ್ಯಾಯಾಧೀಶ ಜೆ.ಟಿ. ಉತ್ಪತ್ ಅವರು ಮುಂದಿನ ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿದ್ದರು.
ಆದರೆ, ಉತ್ಪತ್ ಜೂನ್ 25ರಂದು ವಿಶೇಷ ನ್ಯಾಯಾಲಯದಿಂದ ವರ್ಗಾವಣೆಯಾಗಿದ್ದರು.
2014ರ ಅಕ್ಟೋಬರ್ 31ರಂದು ವಿಚಾರಣೆ ಕೈಗೆತ್ತಿಕೊಂಡಿದ್ದ ಲೋಯಾ ಅವರು ಅಮಿತ್ ಷಾ ಹಾಜರಾತಿಗೆ ವಿನಾಯಿತಿ ನೀಡಲು ಸಮ್ಮತಿಸಿದ್ದರು.
ಆದರೆ, ಅದೇ ದಿನ ಷಾ ಮುಂಬೈನಲ್ಲಿದ್ದರೂ ಯಾಕೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಎಂದು ಲೋಯಾ ಪ್ರಶ್ನಿಸಿದ್ದರು. ಮುಂದಿನ ವಿಚಾರಣೆಯನ್ನು ಲೋಯಾ ಡಿಸೆಂಬರ್ 15ಕ್ಕೆ ಮುಂದೂಡಿದ್ದರು.
ಲೋಯಾ ಮೃತಪಟ್ಟಿದ್ದಾರೆ ಎಂಬ ಮಾಹಿತಿ 2014ರ ಡಿಸೆಂಬರ್ 1ರಂದು ಅವರ ಕುಟುಂಬ ಸದಸ್ಯರಿಗೆ ಸಿಕ್ಕಿತ್ತು.
ಲೋಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ಆಗ ವರದಿ ಮಾಡಿದ್ದವು.
ಮರಣೋತ್ತರ ಪರೀಕ್ಷೆಯ ವರದಿಯೂ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಆ ಬಳಿಕ ಈ ಸಾವಿನ ಬಗ್ಗೆ ಹೆಚ್ಚು ಚರ್ಚೆ ನಡೆಯಲಿಲ್ಲ.
ಸೊಹ್ರಾಬುದ್ದೀನ್ ಪ್ರಕರಣ :
ಸೊಹ್ರಾಬುದ್ದೀನ್ ಭೂಗತ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಜತೆಗೆ ಲಷ್ಕರ್–ಎ–ತೊಯಬಾ (ಎಲ್‌ಇಟಿ) ಜತೆ ಸಂಪರ್ಕ ಹೊಂದಿದ್ದ ಎಂದು ಗುಜರಾತ್ ಪೊಲೀಸರು ಆಪಾದಿಸಿದ್ದರು.
ಮಹಾರಾಷ್ಟ್ರದ ಸಾಂಗ್ಲಿಯಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಸೊಹ್ರಾಬುದ್ದೀನ್ ಹಾಗೂ ಆತನ ಪತ್ನಿ ಕೌಸರ್ ಬಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಅಪಹರಿಸಿದ್ದರು.
2005ರ ನವೆಂಬರ್ 26ರಂದು ಗಾಂಧಿನಗರದ ಬಳಿ ಆತನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಯಿತು.
ನಕಲಿ ಎನ್‌ಕೌಂಟರ್‌ಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದ ಸೊಹ್ರಾಬುದ್ದೀನ್ ಬಂಟ ತುಳಸಿರಾಮ್ ಪ್ರಜಾಪತಿಯನ್ನು 2006ರ ಡಿಸೆಂಬರ್‌ನಲ್ಲಿ ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಛಪ್ರಿ ಗ್ರಾಮದಲ್ಲಿ ಪೊಲೀಸರು ನಕಲಿ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದರು.
ಕೆಲ ಪೊಲೀಸ್ ಅಧಿಕಾರಿಗಳ ಜತೆಗೂಡಿ ಅಮಿತ್ ಷಾ ಅವರು ನಕಲಿ ಎನ್‌ಕೌಂಟರ್ ಸಂಚು ರೂಪಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಷಾ ಅವರನ್ನು 2010ರಲ್ಲಿ ಸಿಬಿಐ ಬಂಧಿಸಿತ್ತು. ಗುಜರಾತ್‌ಗೆ ಕಾಲಿಡಬಾರದು ಎನ್ನುವ ಷರತ್ತಿನೊಂದಿಗೆ ಮೂರು ತಿಂಗಳ ಬಳಿಕ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಸಿಬಿಐ ಮನವಿ ಮೇರೆಗೆ 2012ರ ಸೆಪ್ಟೆಂಬರ್‌ನಲ್ಲಿ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲಾಗಿತ್ತು.