LATEST NEWS
ಮೊದಲ ಬಲಿ ಪಡೆದ ಉಡುಪಿ ಮರಳುಗಾರಿಕೆ ಸಮಸ್ಯೆ

ಮೊದಲ ಬಲಿ ಪಡೆದ ಉಡುಪಿ ಮರಳುಗಾರಿಕೆ ಸಮಸ್ಯೆ
ಉಡುಪಿ ಅಕ್ಟೋಬರ್ 26: ಉಡುಪಿ ಮರಳುಗಾರಿಕೆಗೆ ನಿಷೇಧ ಮೊದಲ ಬಲಿ ಪಡೆದಿದೆ. ಉಡುಪಿಯಲ್ಲಿ ನಡೆಯುತ್ತಿರುವ ಮರಳುಗಾರಿಕೆ ಆರಂಭಕ್ಕೆ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದ್ದು, ಈತ ಕಾಪು ತಾಲೂಕಿನ ಹೆಜಮಾಡಿಯ ಎಸ್ ಎಸ್ ರೋಡ್ ನಿವಾಸಿಯಾಗಿದ್ದು, ಮರಳುಗಾರಿಕೆ ನಂಬಿ ಜೀವನ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಮರಳುಗಾರಿಕೆಗೆ ನಡೆಸುವುದಕ್ಕಾಗಿ ಮಹಮ್ಮದ್ ಹನೀಫ್ ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿದ್ದ, ಅಲ್ಲದೆ ಮರಳುಗಾರಿಕೆಗೋಸ್ಕರವಾಗಿ ಎರಡು ದೋಣಿ ಹಾಗೂ ನದಿ ಬದಿ ದಕ್ಕೆಯನ್ನು ನಿರ್ಮಿಸಿದ್ದರು.

ಆದರೆ ಜಿಲ್ಲಾಡಳಿತ ಈ ಬಾರಿ ಮರಳುಗಾರಿಕೆಗೆ ಅವಕಾಶ ನೀಡಲು ತಡ ಮಾಡಿರುವ ಹಿನ್ನಲೆಯಲ್ಲಿ ಉದ್ವೇಗಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. 3 ಮಕ್ಕಳು ಮತ್ತು ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ಹನೀಫ್ ವಾಸಿಸುತ್ತಿದ್ದರು, ಮರಳುಗಾರಿಕೆ ನಂಬಿ ಸಾಲ ಮಾಡಿಕೊಂಡಿದ್ದ ಹನೀಫ್ ಗೆ ಇತ್ತೀಚೆಗೆ ಸಾಲಗಾರರ ಕಾಟ ಹೆಚ್ಚಾಗಿತ್ತು ಎಂದು ಹೇಳಲಾಗಿದೆ.
ಮರಳುಗಾರಿಕೆ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಮರಳಿಗಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಅಹೋರಾತ್ರಿ ಪ್ರತಿಭಟನೆಯಲ್ಲಿ ಹನೀಫ್ ಭಾಗವಹಿಸಿದ್ದರು. ಮರಳುಗಾರಿಕೆಗೆ ಅವಕಾಶಕ್ಕೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಎದೆನೋವು ಬಂದಿತ್ತು, ತಕ್ಷಣ ಅವರನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮರಳುಗಾರಿಕೆ ಸ್ಥಗಿತ ಜೊತೆಗೆ ಸಾಲಗಾರರ ಒತ್ತಡಕ್ಕೆ ಬೇಸತ್ತಿದ್ದ ಹನೀಫ್, ಉದ್ಯೋಗ ಇಲ್ಲದೆ ಉದ್ವೇಗದಿಂದ ಹನೀಫ್ ಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ. ಉಡುಪಿ ಮರಳುಗಾರಿಕೆ ಸ್ಥಗಿತ ಮೊದಲ ಬಲಿ ಪಡೆದಿದೆ