Connect with us

    DAKSHINA KANNADA

    ಪಟಾಕಿಯ ಕಿಡಿಗೆ ಹತ್ತಿಸಿದ ಬೆಂಕಿ -3 ಬೋಟ್‌ಗಳು ಬೆಂಕಿಗಾಹುತಿ…!

    ಮಂಗಳೂರು, ಅಕ್ಟೋಬರ್ 29: ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಹಚ್ಚಿದ ಹಿನ್ನೆಲೆ ನದಿಯ ತೀರದಲ್ಲಿ ಲಂಗರು ಹಾಕಿದ್ದ ಬೋಟ್‌ಗಳಿಗೆ ಬೆಂಕಿ ತಗುಲಿ ಮೂರು ಬೋಟ್‌ಗಳು ಹೊತ್ತಿ ಉರಿದ ಘಟನೆ ಮಂಗಳೂರಿನ ಬೆಂಗ್ರೆಯಲ್ಲಿ ನಡೆದಿದೆ.

    ಮೂರು ಬೋಟ್‌ಗಳು ಸಂಪೂರ್ಣವಾಗಿ ಹೊತ್ತಿ ಉರಿದಿದ್ದು ಕೋಟ್ಯಾಂತರ ಮೌಲ್ಯ ರೂಪಾಯಿ ನಷ್ಟವುಂಟಾಗಿದೆ. ಲಕ್ಷದ್ವೀಪಕ್ಕೆ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ಈ ನೌಕೆಗಳನ್ನು ದುರಸ್ತಿ ಕಾರಣಕ್ಕೆ ಎರಡು ವರ್ಷಗಳಿಂದ ನೀರಿನಿಂದ ಮೇಲಕ್ಕೆತ್ತಿ ಇಡಲಾಗಿತ್ತು.

    ಶನಿವಾರ ಸಂಜೆ ವೇಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಭಾರೀ ಪ್ರಮಾಣದ ಬೆಂಕಿಯನ್ನು ನಂದಿಸಲು ಮಂಗಳೂರು ಅಗ್ನಿ ಶಾಮಕ ದಳ ಹಾಗೂ ಎಂಆರ್‌ಪಿಎಲ್‌ನ ಅಗ್ನಿಶಾಮಕ ದಳದವರು ತಡರಾತ್ರಿವರೆಗೂ ಶ್ರಮಿಸಿದರು. ಎಂಎಸ್‌ವಿ ನಜತ್‌, ಎಂಎಸ್‌ವಿ ಅಲ್‌ ಜಝೀರಾ, ಎಂಎಸ್‌ವಿ ಅಲಿ ಮದತ್‌ ಎಂಬ ಹೆಸರಿನ ಈ ಸರಕು ನೌಕೆಗಳು ಲಕ್ಷದ್ವೀಪದ ಉದ್ಯಮಿಗಳಿಗೆ ಸೇರಿದ್ದಾಗಿದ್ದು ಇದರಲ್ಲಿ ಒಂದು ನೌಕೆಯನ್ನು ದುರಸ್ತಿಪಡಿಸಿ ಮತ್ತೆ ಸರಕು ಸಾಗಾಟಕ್ಕೆ ಸಿದ್ಧಗೊಳಿಸಲಾಗಿತ್ತು ಎನ್ನಲಾಗಿದೆ.

    ಯಾರೋ ಉರಿಸಿದ ರಾಕೆಟ್‌ ಪಟಾಕಿ ಬಿದ್ದು ಬೆಂಕಿ ತಗಲಿರುವುದಾಗಿ ಸ್ಥಳೀಯರು ಹೇಳುತ್ತಾರೆ, ಆದರೆ ಪೊಲೀಸರು ಇದನ್ನು ದೃಢಪಡಿಸಿಲ್ಲ. ಮಂಜಿ ನೌಕೆಗಳು ದೊಡ್ಡ ಗಾತ್ರ ದ ಬೋಟ್‌ ಗಳಾಗಿದ್ದು ಸಾಮಾನ್ಯವಾಗಿ ಮಂಗಳೂರು- ಲಕ್ಷದ್ವೀಪ ಮಧ್ಯೆ ಸರಕು ಸಾಗಾಟಕ್ಕೆ ಬಳಕೆಯಾಗುತ್ತವೆ.

    ಇವು ಮಂಗಳೂರು ಹಳೆ ಬಂದರಿಗೆ ಬಂದು ಅಲ್ಲಿಂದ ಸರಕು ಕೊಂಡೊಯ್ಯುತ್ತವೆ. ಸದ್ಯ ದುರಸ್ತಿಗಾಗಿ ಬೆಂಗರೆಯ ತೀರದಲ್ಲಿ ಇರಿಸಲಾಗಿತ್ತು. ಬೆಂಕಿ ಅವಘಡದಿಂದ ಒಂದು ಮನೆ ಹಾಗೂ ಮೀನು ದಾಸ್ತಾನು ಇಡುವ ಶೆಡ್‌ಗೂ ಹಾನಿಯಾಗಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯರು ಕೂಡ ಕೈ ಜೋಡಿಸಿದ್ದರು.

    ಪಕ್ಕದ ನದಿಗೆ ಪಂಪ್‌ ಅಳವಡಿಸಿ ನೀರು ಹಾಯಿಸಲಾಯಿತು. ಆದರೆ ಗಾಳಿಯ ತೀವ್ರತೆ ಇದ್ದುದರಿಂದ ಬೆಂಕಿ ನಿಯಂತ್ರಿಸಲು ಹರಸಾಹಸ ಪಡ ಬೇಕಾಯಿತು. ಈ ಎಲ್ಲಾ ಬೋಟುಗಳು ಲಕ್ಷದ್ವೀಪಕ್ಕೆ ಸರಕು ಸಾಗಿಸುವ ಬೋಟುಗಳೆಂದು ಹೇಳಲಾಗಿದೆ. ಪಣಂಬೂರು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *