Connect with us

LATEST NEWS

ಯಾಕಾದರೂ ಗೆದ್ದೆನೊ ಎನ್ನಿಸುತ್ತಿದೆ: ಓಣಂ ಬಂಪರ್‌ ಲಾಟರಿ ವಿಜೇತ ಅನೂಪ್‌

ತಿರುವನಂತಪುರ, ಸೆಪ್ಟೆಂಬರ್‌ 24: ‘ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ನನ್ನ ಮಗನಿಗೆ ಹುಷಾರಿಲ್ಲ. ಆದರೂ ನನಗೆ ಆತನ ಜೊತೆ ಇರಲು ಆಗುತ್ತಿಲ್ಲ. ಲಾಟರಿಯನ್ನು ಗೆದ್ದಾಗ ನನಗೆ ಭಾರಿ ಸಂತೋಷವಾಗಿತ್ತು. ಆದರೆ ಈಗ, ಯಾಕಾದರೂ ಗೆದ್ದೆನೊ ಎನ್ನಿಸುತ್ತಿದೆ’.

ಇದು ಕಳೆದ ಭಾನುವಾರ ಓಣಂ ಬಂಪರ್‌ ಲಾಟರಿಯಲ್ಲಿ ₹25 ಕೋಟಿ ಗೆದ್ದಿರುವ ಕೇರಳದ ಆಟೊಚಾಲಕ ಅನೂಪ್‌ ಅವರ ಮಾತುಗಳು. ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಗೆದ್ದಿರುವ ಅನೂಪ್‌ ಅವರ ಮನೆ ಮುಂದೆ ಸಕ್ಕರೆಗೆ ಇರುವೆ ಮುತ್ತಿದಂತೆ ದುಡ್ಡಿನ ಸಹಾಯ ಕೇಳಿ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಬೇಸತ್ತಿರುವ ಅನೂಪ್‌ ಅವರು ಮನೆಯಿಂದ ಓಡಿಹೋಗಿದ್ದಾರೆ. ತಮ್ಮ ಸಹೋದರಿಯ ಮನೆಯಲ್ಲಿ, ಸ್ನೇಹಿತರ ಮನೆಯಲ್ಲಿ ಉಳಿಯುತ್ತಿದ್ದಾರೆ.

ಶುಕ್ರವಾರ ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ ಅನೂಪ್‌ ಅವರು, ‘ನನಗೆ ಇನ್ನೂ ಹಣ ಬಂದಿಲ್ಲ ಎಂದು ಹೇಳಿದರೆ ಯಾರೂ ನಂಬುತ್ತಿಲ್ಲ. ನಾನು ಈಗ ಇರುವ ಮನೆಯನ್ನು ಬದಲಾಯಿಸಬೇಕು ಎಂದಿದ್ದೇನೆ’ ಎಂದು ಹೇಳಿದ್ದಾರೆ.

ಅನೂಪ್‌ ಅವರ ಸಂಬಂಧಿಕರಾದ ಸೂರಜ್‌ ಅವರು ಮಾತನಾಡಿ, ‘ಹಣದ ಸಹಾಯ ಕೇಳಿಕೊಂಡು ಬರುತ್ತಿರುವವರಿಂದ ತಪ್ಪಿಸಿಕೊಳ್ಳಲು ದೂರದ ಊರುಗಳಿಗೆ ಅನೂಪ್ ಅವರು ಓಡಿಹೋಗುವಂತಾಗಿದೆ. ಆತನ ಮಗನಿಗೆ ಆರೋಗ್ಯ ಸರಿಯಿಲ್ಲ. ಆತನ ಹೆಂಡತಿ ಬಸುರಿ. ಆದರೂ ಆತನಿಗೆ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ’ ಎಂದರು.

‘ಮಕ್ಕಳ ಮದುವೆಗೆ ಅಥವಾ ಚಿಕಿತ್ಸೆಗೆ ಸಹಾಯ ಕೇಳಿ ಬರುತ್ತಿದ್ದಾರೆ. ಇಲ್ಲವೆ ಹೊಸದೊಂದು ಅಂಗಡಿ ತೆರೆಯಬೇಕು ಎಂದು ಕೆಲವರು, ಮನೆಕಟ್ಟುತ್ತಿದ್ದೇವೆ ಸಹಾಯ ಮಾಡಿ ಎಂದು ಸಹಾಯಹಸ್ತ ಕೋರಿ ಬರುತ್ತಿದ್ದಾರೆ’ ಎಂದರು. ಲಾಟರಿಯಲ್ಲಿ ದೊಡ್ಡ ಮೊತ್ತದ ಬಹುಮಾನ ಗೆದ್ದವರು ಹಣವನ್ನು ಪೋಲು ಮಾಡುತ್ತಿದ್ದಾರೆ. ಆದ್ದರಿಂದ ಕೇರಳ ಸರ್ಕಾರವು ಹಣ ನಿರ್ವಹಣೆಗಾಗಿ ತರಬೇತಿ ನೀಡುತ್ತಿದೆ. ಅನೂಪ್‌ ಅವರು ಸದ್ಯದಲ್ಲೇ ಈ ತರಬೇತಿಗೆ ದಾಖಲಾಗಲಿದ್ದಾರೆ.

‘ಲಾಟರಿ ಹಣವನ್ನು ಒಳ್ಳೆಯ ರೀತಿಯಲ್ಲಿ ಖರ್ಚು ಮಾಡು’ ಎಂದು ಕಳೆದ ವರ್ಷದ ಓಣಂ ಬಂಪರ್‌ ಲಾಟರಿಯಲ್ಲಿ ಹಣ ಗೆದ್ದಿದ್ದ ಕೊಚ್ಚಿಯ ಆಟೊಚಾಲಕ ಜಯಪಾಲನ್‌ ಅವರು ಅನೂಪ್‌ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಜಯಪಾಲನ್ ಅವರು ಅಂದು ₹12 ಕೋಟಿ ಗೆದ್ದಿದ್ದರು. ತೆರಿಗೆ ಎಲ್ಲಾ ಕಡಿತಗೊಂಡು ₹7.4 ಕೋಟಿ ಅವರ ಕೈಗೆ ಸಿಕ್ಕಿತ್ತು. ಜಯಪಾಲನ್‌ ಅವರು ಇಂದಿಗೂ ಆಟೊಚಾಲಕರಾಗಿಯೇ ಕೆಲಸ ಮಾಡುತ್ತಿದ್ದಾರೆ.

https://youtu.be/UhMaFH4BUmo

Share Information
Continue Reading
Advertisement
Click to comment

Leave a Reply

Your email address will not be published. Required fields are marked *