Connect with us

    KARNATAKA

    ಹೊಸ ವರ್ಷದಿಂದ ಫಾಸ್ಟ್ ಟ್ಯಾಗ್ ಕಡ್ಡಾಯ; ರದ್ದಾಗಲಿದೆ ನಗದು ಪಾವತಿ…

    ಬೆಂಗಳೂರು, ಡಿಸೆಂಬರ್  18: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್​ ಶುಲ್ಕ ಪಾವತಿಸಲು ಫಾಸ್​​ಟ್ಯಾಗ್​ ಕಡ್ಡಾಯ ಮಾಡಿದರೂ, ಅದರ ಬಗ್ಗೆ ನಿರ್ಲಕ್ಷ್ಯವಹಿಸಿದ ವಾಹನ ಮಾಲೀಕರು ಹೊಸ ವರ್ಷದಿಂದ ಟೋಲ್​ ಪ್ಲಾಜಾ ದಾಟುವುದು ಕಷ್ಟವಾಗಲಿದೆ. 2021ರ ಜನವರಿ 1ರಿಂದ ಟೋಲ್​ಪ್ಲಾಜಾಗಳಲ್ಲಿ ನಗದು ಶುಲ್ಕ ಪಾವತಿ ಪಥ ರದ್ದು ಮಾಡಲಾಗುತ್ತಿದ್ದು, ಫಾಸ್​ಟ್ಯಾಗ್​ ಮೂಲಕವೇ ಶುಲ್ಕ ಪಾವತಿಸಬೇಕಿದೆ.

    ಟೋಲ್​ಪ್ಲಾಜಾಗಳಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವುದು, ಇಂಧನ ಉಳಿತಾಯ ಸೇರಿ ಇನ್ನಿತರ ಕಾರಣಗಳಿಂದಾಗಿ 2020ರ ಜನವರಿ 15ರಿಂದ ಟೋಲ್​ ಶುಲ್ಕವನ್ನು ಫಾಸ್​ಟ್ಯಾಗ್​​ ಮೂಲಕ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಫಾಸ್​ಟ್ಯಾಗ್​​ ಇಲ್ಲದವರಿಗಾಗಿ ಟೋಲ್​ಪ್ಲಾಜಾಗಳಲ್ಲಿ ಪ್ರತ್ಯೇಕ ಪಥವನ್ನು ನಿಗದಿ ಮಾಡಲಾಗಿದೆ. ಒಂದು ವೇಳೆ ಫಾಸ್​ಟ್ಯಾಗ್​ ಇಲ್ಲದ ವಾಹನಗಳು ಫಾಸ್​ಟ್ಯಾಗ್​ ಪಥದಲ್ಲಿ ಸಂಚರಿಸಿದರೆ, ದುಪ್ಪಟ್ಟು ಶುಲ್ಕ ಪಾವತಿಸಿ ತೆರಳುವ ನಿಯಮ ಜಾರಿಗೊಳಿಸಲಾಗಿದೆ. ಆದರೆ, ಇದೀಗ ಟೋಲ್​ ಪ್ಲಾಜಾಗಳಲ್ಲಿನ ನಗದ ಶುಲ್ಕ ಪಾವತಿ ಪಥವನ್ನು ರದ್ದು ಮಾಡಲಾಗುತ್ತಿದ್ದು, ಜ. 1ರಿಂದ ಎಲ್ಲ ಪಥಗಳನ್ನು ಫಾಸ್​ಟ್ಯಾಗ್​ಪಥವನ್ನಾಗಿಸಲಾಗುತ್ತಿದೆ.

    ಫಾಸ್​ಟ್ಯಾಗ್​ ಕಡ್ಡಾಯದ ನಂತರ ದೇಶದಲ್ಲಿ ಫಾಸ್​ಟ್ಯಾಗ್​ ಖರೀದಿ ಹೆಚ್ಚಳವಾಗಿದೆ. ಮೊದಲಿಗೆ 15 ಲಕ್ಷದಷ್ಟಿದ್ದ ಫಾಸ್​ಟ್ಯಾಗ್​ ಬಳಕೆದಾರರ ಸಂಖ್ಯೆ ಇದೀಗ 2 ಕೋಟಿಗೂ ಹೆಚ್ಚಿದೆ. ಆದರೆ ಇನ್ನೂ ಶೇ. 10ರಿಂದ 15 ವಾಹನಗಳು ಫಾಸ್​ಟ್ಯಾಗ್​ ವ್ಯಾಪ್ತಿಗೆ ಒಳಪಡಬೇಕಿವೆ. ಅಂತಹ ವಾಹನಗಳು ಈಗಲೇ ಫಾಸ್​ಟ್ಯಾಗ್​ ಖರೀದಿಸಿ, ನೋಂದಣಿ ಮಾಡಿಕೊಳ್ಳಬೇಕಿದೆ.

    ಪಾವತಿಸಬೇಕಾಗುತ್ತದೆ ದುಪ್ಪಟ್ಟು ಶುಲ್ಕ: ಟೋಲ್​ಪ್ಲಾಜಾಗಳಲ್ಲಿ ನಗದು ರೂಪದಲ್ಲಿ ಟೋಲ್​ ಶುಲ್ಕ ಪಾವತಿ ವ್ಯವಸ್ಥೆ ರದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಪ್ರತಿ ವಾಹನವೂ ಫಾಸ್​ಟ್ಯಾಗ್​ ಪಥದಲ್ಲಿಯೇ ಸಂಚರಿಸಬೇಕಿದೆ. ಒಂದು ವೇಳೆ ಫಾಸ್​ಟ್ಯಾಗ್​ಇಲ್ಲದ ವಾಹನಗಳು ನಿಯಮದಂತೆ ದುಪ್ಪಟ್ಟು ಶುಲ್ಕ ಪಾವತಿಸಿ ಟೋಲ್​ಪ್ಲಾಜಾಗಳ ಮೂಲಕ ತೆರಳಬೇಕಿದೆ.

    ಫಾಸ್​ಟ್ಯಾಗ್​ ಕಡ್ಡಾಯ ಆದೇಶ ಜಾರಿ ನಂತರ ಟೋಲ್​ ಶುಲ್ಕ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ಫಾಸ್​ಟ್ಯಾಗ್​ ಮುನ್ನ ದೇಶಾದ್ಯಂತ ಪ್ರತಿದಿನ ಸರಾಸರಿ 70 ಕೋಟಿ ರೂ. ಟೋಲ್​ ಶುಲ್ಕ ವಸೂಲಿ ಆಗುತ್ತಿತ್ತು. ಆದರೀಗ ಅದು ಸರಾಸರಿ 92 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2021ರ ಜನವರಿಯಿಂದ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

    ಫಾಸ್​ಟ್ಯಾಗ್​ ಖರೀದಿ ಹೇಗೆ?
    ಕೇಂದ್ರ ಸರ್ಕಾರ ನಿಯೋಜಿಸಿರುವ 22 ಬ್ಯಾಂಕ್​ಗಳ ಶಾಖೆಗಳು, ನಿಗದಿತ ಪೆಟ್ರೋಲ್​ ಬಂಕ್​ಗಳು, ಟೋಲ್​ ಪ್ಲಾಜಾದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತೆರೆದಿರುವ ಕೇಂದ್ರಗಳಲ್ಲಿ ಫಾಸ್​ಟ್ಯಾಗ್​ ಸ್ಟಿಕ್ಕರ್​ಗಳು ದೊರೆಯುತ್ತವೆ. ಸ್ಟಿಕ್ಕರ್​ ಖರೀದಿಗೆ ವಾಹನದ ನೋಂದಣಿ ಪ್ರಮಾಣ ಪತ್ರ (ಆರ್​.ಸಿ.), ವಾಹನ ಮಾಲೀಕರು ವಾಹನ ಚಾಲನ ಪರವಾನಗಿ (ಡಿಎಲ್​), 2 ಪಾಸ್​ಪೋರ್ಟ್​ ಸೈಜ್ ಫೋಟೋ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್​ ಕಾರ್ಡ್​ ಸೇರಿ ಯಾವುದಾದರೊಂದು ಗುರುತಿನ ಪ್ರಮಾಣಪತ್ರ ನೀಡಬೇಕು. ಅದನ್ನು ದೃಢೀಕರಿಸಿದ ನಂತರ ಫಾಸ್​ಟ್ಯಾಗ್​​ ಸ್ಟಿಕ್ಕರ್​ ನೀಡಲಾಗುತ್ತದೆ. ಶಾಪಿಂಗ್​ ವೆಬ್​ಸೈಟ್ಸ್​ ಮೂಲಕವೂ ಫಾಸ್​ಟ್ಯಾಗ್​​ ಖರೀದಿ ಮಾಡಬಹುದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *