LATEST NEWS
ಕೃಷಿ ಕಾರ್ಯಕ್ಕೆ ಹೋರಿ ಸಾಗಿಸುತ್ತಿದ್ದ ವಾಹನ ತಡೆದು ಹಲ್ಲೆ – ಹಿಂದೂ ಸಂಘಟನೆ ಕಾರ್ಯಕರ್ತರು ಅರೆಸ್ಟ್

ಮಂಗಳೂರು ಮಾರ್ಚ್ 29: ಅಕ್ರಮ ಗೋಸಾಗಾಟ ಮಾಡುತ್ತಿದ್ದಾರೆ ಎಂಬ ತಪ್ಪು ಮಾಹಿತಿಯಿಂದ ಕೃಷಿ ಕಾರ್ಯಕ್ಕೆ ಹೋರಿ ಸಾಗಿಸುತ್ತಿದ್ದ ವಾಹನವನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಡ್ಡಗಟ್ಟಿ ವಾಹನದಲ್ಲಿದ್ದ ರೈತನ ಮೇಲೆ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ ಈ ಘಟನೆ ನಡೆದಿದ್ದು, ಅಕ್ರಮ ಗೋಸಾಗಾಟ ಆರೋಪ ಬಂದ ಹಿನ್ನೆಲೆಯಲ್ಲಿ ಕೃಷಿ ಕಾರ್ಯಕ್ಕೆ ಹೋರಿಯನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದ ಪುಂಡರು ಪಿಕಪ್ ವಾಹನದಲ್ಲಿದ್ದ ರೈತ ಕೂಸ ಪೂಜಾರಿ (56) ಮತ್ತು ವಾಹನ ಚಾಲಕ ಅಬ್ದುಲ್ ರೆಹಮಾನ್ ಎಂಬವರ ಮೇಲೆ ರೌಡಿಗಳಂತೆ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಾಹಿತಿಯ ಪ್ರಕಾರ, ಯಾರೋ ಕಿಡಿಗೇಡಿಗಳು ಹೋರಿಯನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆ ಎಂದು ಊರಲ್ಲಿ ತಿರುಗಾಡುತ್ತಿದ್ದ ಹಿಂದುತ್ವ ಪರ ಸಂಘಟನೆಯ ಕಾರ್ಯಕರ್ತರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಮೂಡಬಿದಿರೆಯ ಬೆಳುವಾಯಿ ಕಾಂತಾವರ ಕ್ರಾಸ್ ಬಳಿ ದಾಳಿ ನಡೆಸಿದ್ದ 9 ಮಂದಿ ಹಿಂದುತ್ವ ಪರ ಸಂಘಟನೆಯ ಕಾರ್ಯಕರ್ತರು, ವಾಹನದಲ್ಲಿದ್ದ ರೈತನನ್ನು ಬೆದರಿಸಿ ರೌಡಿಗಳಂತೆ ಹಲ್ಲೆ ನಡೆಸಿದ್ದಾರೆ.
ವಾಸ್ತವ ಸಂಗತಿ ಏನೆಂದರೆ, ಕೃಷಿ ಕಾರ್ಯಕ್ಕೆ ರೈತ ಕೂಸ ಪೂಜಾರಿ ಅವರು ಅಬ್ದುಲ್ ರೆಹಮಾನ್ ಅವರ ವಾಹನದಲ್ಲಿ ಹೋರಿ ಸಾಗಿಸುತ್ತಿದ್ದರು. ಕಾರ್ಕಳದಿಂದ ಹೋರಿ ಖರೀದಿಸಿ ಬಂಟ್ವಾಳದ ತಮ್ಮ ಮನೆಗೆ ಸಾಗಿಸುತ್ತಿದ್ದ ವೇಳೆ ಗೂಂಡಾಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪುಂಡರ ದಾಳಿಯಿಂದ ವಾಹನ ಜಖಂಗೊಂಡಿದ್ದು, ದಾಳಿ ನಡೆಸಿದ ದುಷ್ಕರ್ಮಿಗಳಿಂದಲೇ ಅದರ ಹಣವನ್ನು ವಸೂಲಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳು ಧನರಾಜ್ ಮತ್ತು ಸುಧೀರ್ ಶೆಟ್ಟಿ ಎಂಬ ಇಬ್ಬರನ್ನು ಮಾತ್ರ ಬಂಧಿಸಿದ್ದಾರೆ. ಅವರ ಬಿಡುಗಡೆಗೂ ಒತ್ತಡ ಕೇಳಿ ಬಂದಿದೆ ಎಂಬ ಆರೋಪವೂ ಸ್ಥಳೀಯ ಮಟ್ಟದಲ್ಲಿ ವ್ಯಕ್ತವಾಗಿದೆ.