Connect with us

DAKSHINA KANNADA

ತುರ್ತು ಚಿಕಿತ್ಸೆ ಅಗತ್ಯವಿಲ್ಲದೆ ಇದ್ದರೂ ಝಿರೋ ಟ್ರಾಫಿಕ್ – ದೂರು ದಾಖಲು

ಮಂಗಳೂರು: ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲದೆ ಇದ್ದರೂ ಪುತ್ತೂರಿನಿಂದ ಬೆಂಗಳೂರಿಗೆ ಝಿರೋ ಟ್ರಾಫಿಕ್‌ ‌ ನೆಪದಲ್ಲಿ ಬೇಕಾಬಿಟ್ಟಿ ವಾಹನ ಓಡಿಸಿ ಸಂಚಾರಕ್ಕೆ ಅಡಚಣೆ ಮಾಡಿರುವ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಮಗ್ಗಲಮಕ್ಕಿ ಗಣೇಶ್‌ ಬಣಕಲ್‌ ಠಾಣೆಗೆ ದೂರು ನೀಡಿದ್ದಾರೆ.


ಇತ್ತೀಚೆಗೆ ರೋಗಿಗೆ ತಕ್ಷಣದ ಶಸ್ತ್ರಚಿಕಿತ್ಸೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ನಂಬಿಸಿ ಆಂಬ್ಯುಲೆನ್ಸ್‌ ಸಂಚರಿಸಲು ಶಿರಾಡಿ ಘಾಟ್‌ ರಸ್ತೆ ಸಂಚಾರಕ್ಕೆ ಸುಗಮವಾಗಿದ್ದರೂ ಕೂಡ ಪುತ್ತೂರು, ಚಾರ್ಮಾಡಿ, ಕೊಟ್ಟಿಗೆಹಾರ, ಮೂಡಿಗೆರೆ ಹ್ಯಾಂಡ್‌ಪೋಸ್ಟ್‌, ಬೇಲೂರು ರಸ್ತೆ ಮೂಲಕ ಬೆಂಗಳೂರಿಗೆ ಹೋಗಿದ್ದಾರೆ.


ತುರ್ತಾಗಿ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ ಎಂದು ಝಿರೋ ಟ್ರಾಫಿಕ್‌ ‌ ಮಾಡಲಾಗಿತ್ತು. ಆದರೆ, ಆರು ದಿನ ಕಳೆದರೂ ಶಸ್ತ್ರಚಿಕಿತ್ಸೆ ನಡೆದಿಲ್ಲ. ತುರ್ತು ಚಿಕಿತ್ಸೆ ಅಗತ್ಯ ಇಲ್ಲದೇ ಇದ್ದರೂ ಕೂಡ ತುರ್ತು ಚಿಕಿತ್ಸೆ ಇದೆ ಎಂದು ಬಿಂಬಿಸಿ ಜೀರೋ ಟ್ರಾಫಿಕ್‌ನಲ್ಲಿ ಕರೆದ್ಯೊಯಲಾಗಿದೆ. ಆ ಸಂದರ್ಭ ಇತರೆ ವಾಹನಗಳನ್ನು ತಡೆದು ನಿಲ್ಲಿಸಿರುವುದರಿಂದ ಸಾವಿರಾರು ಜನರಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಡಿ.2ರಂದು ಝಿರೋ ಟ್ರಾಫಿಕ್‌ ‌ ಮಾಡಿಸಿ ಪೊಲೀಸ್‌ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಸಾಮಾನ್ಯ ಜನರ ಮೂಲಕ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಆಂಬ್ಯುಲೆನ್ಸ್‌ ಸಹಿತ ಇತರೆ 4 ರಿಂದ 5 ಖಾಸಗಿ ವಾಹನಗಳು ಅತ್ಯಂತ ವೇಗವಾಗಿ ಓಡಿ ಜನರಲ್ಲಿ ಭೀತಿ ಮೂಡಿಸಿದೆ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಕಾರುಣ್ಯ ನಿಧಿ ಕರ್ನಾಟಕ ಚಾರಿಟೇಬಲ್‌ ಟ್ರಸ್ಟ್‌ನ ಕಾರ್ಯನಿರ್ವಾಹಕರಾದ ಹರ್ಷದ್‌ ಕೊಪ್ಪ, ನಿಸಾರ್‌ ನಿಚ್ಚು ಮಂಗಳೂರು, ಜಲೀಲ್‌ ಮತ್ತಿತರರು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಕೆಎ 51 ಎಬಿ 7860 ನೋಂದಣಿಯ ಆಂಬ್ಯುಲೆನ್ಸ್‌ಗೆ ಇನ್ಸೂರೆನ್ಸ್‌ ಇಲ್ಲದಿರುವುದು, ರೋಡ್‌ ಟ್ಯಾಕ್ಸ್‌ ಕಟ್ಟದೇ ಇರುವುದು, ಎಫ್‌ಸಿ ಮಾಡದಿರುವುದು ತಿಳಿದುಬಂದಿದೆ. ಈ ಕುರಿತು ತನಿಖೆ ನಡೆಸಿ, ಆಂಬ್ಯುಲೆನ್ಸ್‌ ಸಹಿತ ಅತಿವೇಗವಾಗಿ ಚಲಿಸಿದ ಇತರೆ ಎಲ್ಲಾ ವಾಹನಗಳನ್ನು ವಶಪಡಿಸಿಕೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಿದ್ದಾರೆ. .