LATEST NEWS
2000 ನೀಡುವ ವದಂತಿಗೆ ಮುಗಿಬಿದ್ದ ಜನರು….!!
2000 ನೀಡುವ ವದಂತಿಗೆ ಮುಗಿಬಿದ್ದ ಜನರು….!!
ಮಂಗಳೂರು ಎಪ್ರಿಲ್ 15: ಒಂದೆಡೆ ಜಿಲ್ಲಾಡಳಿತದ ಕಟ್ಟು ನಿಟ್ಟಿನ ಲಾಕ್ ಡೌನ್ ಇನ್ನೊಂದೆಡೆ ಸುಳ್ಳು ಸುದ್ದಿಗಳಿಂದ ಗುಂಪು ಸೇರುತ್ತಿರುವ ಜನರು ಕೊರೊನಾ ಮಹಾ ಮಾರಿ ಓಡಿಸಲು ಸಾಮಾಜಿಕ ಅಂತರವನ್ನು ಅಪಹಾಸ್ಯ ಮಾಡಿದಂತಿದೆ ಇಂದು ಮಂಗಳೂರಿನಲ್ಲಿ ಸೇರಿದ ಜನರ ಗುಂಪು, ನಗರದಲ್ಲಿ ಗಲ್ಲಿ ಗಲ್ಲಿಯಲ್ಲಿ ಪೊಲೀಸ್ ಬ್ಯಾರೆಕೇಡ್ ಹಾಕಿ ವಾಹನಗಳಲ್ಲಿ ತಿರುಗಾಡುವವರನ್ನು ಅಡ್ಡ ಹಾಕಿ ಲಾಠಿ ಬೀಸುವ ಪೊಲೀಸ್ ಅಧಿಕಾರಿಗಳಿಗೆ ಒಂದೇ ಸ್ಥಳದಲ್ಲಿ 700 ಜನ ಸೇರಿರುವುದು ತಿಳಿಯದೇ ಇರುವುದು ಹಲವು ಪ್ರಶ್ನೆಗಳನ್ನು ಎತ್ತಿದೆ.
ಮಂಗಳೂರು ನಗರದ ಹೊರವಲಯದ ಕೂಳೂರಿನ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್ ಗೆ ಹಾಕಲಾಗುತ್ತದೆ ಎಂದು ತಪ್ಪು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸುಮಾರು 600-750 ಮಂದಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರು ಗುಂಪು ಸೇರಿದ ಘಟನೆ ನಡೆದಿದೆ.
‘ನಮ್ಮ ಬ್ಯಾಂಕ್ ಖಾತೆಗೆ 2000 ರೂ. ಹಣ ಬರುತ್ತದೆ’ ಎಂದು ನಾವೆಲ್ಲಾ ಬಂದು ನಿಂತಿದ್ದೇವೆ ಎಂದರು. ಆದರೆ ಯಾರು ಹೇಳಿದ್ದು ಎಂದು ಕೇಳಿದರೆ ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಗಳನ್ನು ಹಿಡಿದುಕೊಂಡು ಸರತಿ ಸಾಲುಗಳಲ್ಲಿ ಮಧ್ಯಾಹ್ನ 11.30 ಯಿಂದ 3.30 ಯವರೆಗೆ ಜನ ಜಂಗುಳಿ ಸೇರಿತ್ತು. ಮಾಹಿತಿ ಪಡೆಯುವವರ ಬಳಿ ಯಾಕಾಗಿ ಕೂಲಿ ಕಾರ್ಮಿಕರ ಬ್ಯಾಂಕ್ ಖಾತೆ ಸಂಖ್ಯೆ ಪಡೆಯಲಾಗುತ್ತಿದೆ ಎಂದು ಕೇಳಿದರೆ, ನಮಗೆ ಡಿಸಿ ಕಚೇರಿಯಿಂದ ಕೂಲಿ ಕಾರ್ಮಿಕರ ಮಾಹಿತಿ ಪಡೆಲು ಹೇಳಿದ್ದಾರೆ. ಆದರೆ ಯಾರಿಗೂ 2000 ರೂ. ಬ್ಯಾಂಕ್ ಖಾತೆಗೆ ಹಾಕುತ್ತಿಲ್ಲ ಎಂದರು.
ಸ್ಥಳಕ್ಕೆ ಆಗಮಿಸಿದ್ದ ಕಾರ್ಮಿಕ ಅಧಿಕಾರಿಗಳನ್ನು ಕೂಲಿ ಕಾರ್ಮಿಕರು ಮುತ್ತಿಗೆ ಹಾಕಿದರು. ಆದರೆ ಅವರು ಕಾರು ಚಲಾಯಿಸಿ ಹೊರಟೇ ಹೋದರು. ಅಲ್ಲದೆ ಮಾಹಿತಿ ಪಡೆಯುವವರೂ ತಮ್ಮ ತಮ್ಮ ಬೈಕ್ ಏರಿ ಅಲ್ಲಿಂದ ಪರಾರಿ ಆಗಿದ್ದಾರೆ. ಒಟ್ಟಿನಲ್ಲಿ 2000 ಸಿಗುತ್ತದೆ ಎಂದು ಬಂದವರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಮನೆ ದಾರಿ ಹಿಡಿದರು. ಆದರೆ ಈ ಬಗ್ಗೆ ಪೊಲೀಸ್ ಇಲಾಖೆಗೆ, ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಯುಕ್ತರು ಯಾರಿಗೂ ಸರಿಯಾದ ಮಾಹಿತಿ ಇಲ್ಲ.