KARNATAKA
ಉಡುಪಿ ಕೋಟದಲ್ಲಿ ಉದ್ಯಮಿ ಮನೆಗೆ ನಕಲಿ ಐಟಿ ದಾಳಿ ನಡೆಸಿ ದರೋಡೆಗೆ ಯತ್ನ,ಇಬ್ಬರ ಬಂಧನ..!
ಉಡುಪಿ : ಕುಂದಾಪುರ ಸಮೀಪದ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ದರೋಡೆ ಯತ್ನ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ನಾಯಕ್, ದೇವರಾಜ್ ಸುಂದರ್ ಮೆಂಡನ್ ಬಂಧಿತ ಆರೋಪಿಗಳಾಗಿದ್ದಾರೆ. ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಮಣೂರು ಗ್ರಾಮದ ಮಣೂರು ಬಸ್ ನಿಲ್ದಾಣದ ಎದುರು ಇರುವ ಶ್ರೀಮತಿ ಕವಿತಾ ಎಂಬವರ ಮನೆಗೆ ಸ್ವಿಫ್ಟ್ ಮತ್ತು ಇನ್ನೋವಾ ಕಾರಿನಲ್ಲಿ ಬಂದ 6 ರಿಂದ 8 ಜನ ಅಪರಿಚಿತರ ತಂಡ ಆದಾಯ ತೆರಿಗೆ ಅಧಿಕಾರಿಗಳೆಂದು ಬಿಂಬಿಸಿ ಮನೆಯ ಆವರಣ ಗೋಡೆ ಹಾರಿ ಅಕ್ರಮ ಪ್ರವೇಶ ಮಾಡಿ, ಮನೆಯ ಬಾಗಿಲು ತೆರೆಯಲು ವಿಫಲ ಯತ್ನ ಮಾಡಿ ಬಳಿಕ ಗೇಟನ್ನು ಹಾನಿಗೊಳಿಸಿ ಬಂದ ಕಾರಿನಲ್ಲಿ ವಾಪಾಸ್ಸು ಹೋಗಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ PM ನೇತೃತ್ವದಲ್ಲಿ ಮೂರು ತಂಡಗಳನ್ನು ರಚನೆ ಮಾಡಲಾಗಿತ್ತು. ಕೋಟ ಠಾಣಾ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ ಹಾಗೂ ಶ್ರೀಮತಿ ಸುಧಾಪ್ರಭು ಮತ್ತು ಹಿರಿಯಡ್ಕ ಠಾಣಾ ಪಿಎಸ್‌ಐ ಮಂಜುನಾಥ ರವರನ್ನು ಒಳಗೊಂಡ 03 ಪ್ರತ್ಯೆಕ ತಂಡಗಳು 1 ವಿವಿಧ ಆಯಾಮಗಳಲ್ಲಿ ಆರೋಪಿತರ ಪತ್ತೆಗಾಗಿ ಬೆಂಗಳೂರು ಮತ್ತು ಮಹಾರಾಷ್ಟ್ರ ಕ್ಕೆ ಮತ್ತು ಸ್ಥಳೀಯವಾಗಿ ಶೋಧನ ಕಾರ್ಯ ಕೈಗೊಂಡಿತ್ತು. ಕೊನೆಗೂ ದರೋಡೆ ಯತ್ನಿಸಿದ್ದ ಆರೋಪಿಗಳಲ್ಲಿ ಚಿಕ್ಕಮಗಳೂರು ಮೂಲದ ಪ್ರಸ್ತು ಮುಂಬೈಯಲ್ಲಿರುವ ಸಂತೋಷ್ ನಾಯಕ್(45), ಕಾಪು ಪೊಲಿಪು ಮೂಲದ ಪ್ರಸ್ತುತ ಮುಂಬೈಯಲ್ಲಿರುವ ದೇವರಾಜ್ ಸುಂದರ್ ಮೆಂಡನ್(46) ಅವರುಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರುಗಳಲ್ಲಿ ಇನ್ನೋವಾ ಕಾರನ್ನು ಜಪ್ತಿ ಮಾಡಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ. ನಕಲಿ ಐಟಿ ದಾಳಿ ಮಾಡುವ ನೆಪದಲ್ಲಿ ಮನೆಗೆ ನುಗ್ಗಿ ದರೋಡೆ ಮಾಡುವ ಸಂಚು ರೂಪಿಸಿ ಮಹಾರಾಷ್ಟ್ರದಿಂದ ಬಂದಿರುವುದಾಗು ಆರೋಪಿಗಳು ಪ್ರಾರ್ಥಮಿಕ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಸ್ಥಳಿಯ ಆರೋಪಿಗಳು ಭಾಗಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು ಅವರ ಪತ್ತೆಗಾಗಿ ತನಿಖೆಯನ್ನು ಮುಂದುವರಿಸಲಾಗಿದೆ.