LATEST NEWS
ನಕಲಿ ಫೇಸ್ ಬುಕ್ ಖಾತೆ ಪ್ರಕರಣ – ಕೊನೆಗೂ ತಾಯ್ನಾಡಿಗೆ ಮರಳಿದ ಹರೀಶ್ ಬಂಗೇರ

ಮಂಗಳೂರು ಅಗಸ್ಟ್ 18:ನಕಲಿ ಫೇಸ್ ಬುಕ್ ಖಾತೆಯಿಂದಾಗಿ ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೊಳಪಟ್ಟು ಜೈಲಿನಿಂದ ಬಿಡುಗಡೆಗೊಂಡ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದು, ಇಂದು ತಾಯ್ನಾಡಿಗೆ ಮರಳಿದ್ದಾರೆ.
ಸೌದಿಯಿಂದ ಇಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಪತ್ನಿ ಪುತ್ರಿ ಹಾಗೂ ಅವರ ಕುಟುಂಬಸ್ಥರು ಅವರನ್ನು ಬರಮಾಡಿಕೊಂಡು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಈ ಹಿಂದೆ ಕಿಡಿಗೇಡಿಗಳು ಹರೀಶ್ ಬಂಗೇರಾ ಅವರ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಸೌದಿಯ ದೊರೆ ಮತ್ತು ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮೆಕ್ಕಾದ ಬಗ್ಗೆ ಫೇಸ್‌ಬುಕ್ ನಲ್ಲಿ ಅವಹೇಳನಕಾರಿ ಪೋಸ್ವ್ ಹಾಕಿದ್ದರು. ಈ ಆರೋಪದ ಮೇಲೆ ಹರೀಶ್ ಬಂಗೇರರನ್ನು 2019ರ ಡಿಸೆಂಬರ್ ನಲ್ಲಿ ಸೌದಿ ಪೊಲೀಸರು ಬಂಧಿಸಿದ್ದರು.

ಈ ಬಗ್ಗೆ ಹರೀಶ್ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಮೂಡುಬಿದಿರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಎಂಬವರನ್ನು ಬಂಧಿಸಿದ್ದರು.
ಆರೋಪಿಗಳು ಹರೀಶ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು, ಅದರಲ್ಲಿ ಸೌದಿ ದೊರೆ ಮತ್ತು ಮೆಕ್ಕಾದ ವಿರುದ್ಧ ಪೋಸ್ವ್ ಹಾಕಿ, ಅದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ವೈರಲ್ ಮಾಡಿದ್ದರು ಮತ್ತು ನಂತರ ಈ ನಕಲಿ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದರು.
ಕಿಡಿಗೇಡಿಗಳು ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಕುಂದಾಪುರದ ಬಿಜಾಡಿಯ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದಾರೆ.