LATEST NEWS
ಹೆಲ್ಪ್ ಲೈನ್ ಮಂಗಳೂರು ಹೆಸರಲ್ಲಿ ನಕಲಿ ದಾಖಲೆ ಸೃಷ್ಠಿಸುತ್ತಿದ್ದ ಖದೀಮ ಸಿಸಿಬಿ ಬಲೆಗೆ
ಮಂಗಳೂರು ಅಕ್ಟೋಬರ್ 06: ಹೆಲ್ಪ್ ಲೈನ್ ಮಂಗಳೂರು ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ್ನು ಮಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ನಗರದ ಬಿಕರ್ನಕಟ್ಟೆ ಬಜ್ಜೋಡಿಯ ಬರ್ನಾಡ್ ರೋಶನ್ ಮೆಸ್ಕರೆನಸ್ (41) ಎಂದು ಗುರುತಿಸಲಾಗಿದೆ.
ಆರೋಪಿ ನಗರದ ಕಂಕನಾಡಿ-ಪಂಪ್‌ವೆಲ್ ಹಳೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನೆಲ ಅಂತಸ್ತಿನ ಕೊಠಡಿಯಲ್ಲಿ ‘ಹೆಲ್ಪ್‌ಲೈನ್ ಮಂಗಳೂರು’ ಎಂಬ ಹೆಸರಿನ ಸಂಸ್ಥೆಯಲ್ಲಿ ಆಧಾರ್ ಕಾರ್ಡ್, ಪಡಿತರ ಚೀಟಿ (ರೇಶನ್ ಕಾರ್ಡ್), ಅಂಕ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ಇತ್ಯಾದಿಗಳ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ಸಾರ್ವಜನಿಕರಿಗೆ ಮತ್ತು ಸರಕಾರಕ್ಕೆ ವಂಚಿಸುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿಯಿಂದ ವಿವಿಧ ಹೆಸರಿನಲ್ಲಿ ತಯಾರಿಸಿದ ನಕಲಿ ಆಧಾರ್ ಕಾರ್ಡ್‌ಗಳು, ನಕಲಿ ರೇಷನ್ ಕಾರ್ಡ್, ನಕಲಿ ಉದ್ದಿಮೆ ಪರವಾನಿಗೆ ಪತ್ರ, ನಕಲಿ ಎಸೆಸೆಲ್ಸಿ ಅಂಕಪಟ್ಟಿ, ನಕಲಿ ಜನನ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ 3 ವರ್ಷಗಳಿಂದ ಈತನಿಂದ ನಕಲಿ ದಾಖಲಾತಿಗಳನ್ನು ಪಡೆದುಕೊಂಡವರು ಅವುಗಳನ್ನು ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯಗಳನ್ನು ಪಡೆಯಲು ಮತ್ತು ಸರಕಾರದ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಪಡೆಯಲು ಉಪಯೋಗಿಸಿಕೊಂಡು ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಉಂಟು ಮಾಡಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.