Connect with us

LATEST NEWS

ಸ್ಮಾರ್ಟ್ ಫೋನ್ ಗಾಗಿ ಮೊಮ್ಮಗಳ ಕಿವಿಯೊಲೆ ಮಾರಲು ಹೊರಟ ಅಜ್ಜಿ…ಒಂದು ಫೇಸ್‌ಬುಕ್ ಪೋಸ್ಟ್‌ನಿಂದ ಶಾಲಾ ವಿದ್ಯಾರ್ಥಿನಿಗೆ ಸಿಕ್ತು ಹೊಸ ಸ್ಮಾರ್ಟ್‌ಫೋನ್..!

ಮಂಗಳೂರು: ಸಾಮಾಜಿಕ ಜಾಲತಾಣ ಬಳಕೆಯಿಂದಾಗುವ ಅನಾಹುತಗಳನ್ನು ನೋಡಿದ್ದೀವಿ..ಕೇವಲ ಒಂದು ಫೆಸ್ ಬುಕ್ ಪೋಸ್ಟ್ ನಿಂದಾಗಿ ಬೆಂಗಳೂರಿ ದೊಡ್ಡ ಗಲಭೆ ನಡೆದು ಜನರ ಸಾವು ನೋವುಗಳು ಸಂಭವಿಸಿವೆ. ಆದರೆ ಅದೇ ಸಾಮಾಜಿಕ ಜಾಲತಾಣಗಳ ಸರಿಯಾದ ಬಳಕೆಯಿಂದ ಒಂದು ಬಡ ಕುಟುಂಬದ ವಿಧ್ಯಾರ್ಥಿಯ ಶಿಕ್ಷಣಕ್ಕೆ ಸಹಾಯವಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಮಂಗಳೂರಿನ ಬಂಟ್ವಾಳ ತಾಲೂಕಿನಲ್ಲಿ ನಡೆದ ಒಂದು ಘಟನೆ. ಎರಡು ದಿನಗಳ ಹಿಂದೆ ಬಂಟ್ವಾಳದ ಭಾರತಿ ಪ್ರಶಾಂತ್ ಎಂಬುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಒಂದು ಪೋಸ್ಟ್‌ ಹಾಕಿದ್ದರು. ತಮ್ಮ ಮನೆಯ ಪಕ್ಕದಲ್ಲಿ ಒಂದು ಬಡ ಕುಟುಂಬವಿದೆ. ಆ ಮನೆಯಲ್ಲಿ ಇತ್ತೀಚೆಗೆ ದುಡಿಯೋಕೆ ಹೋಗ್ತಿರೋ ಒಬ್ಬ ಹುಡುಗ ಬಿಟ್ಟರೆ ಬೇರೆ ಗಂಡಸರಿಲ್ಲ. ದಿನದ ಹಿಂದೆ ಆ ಮನೆಯ ಅಮ್ಮ ಬಂದು ತನ್ನ ಮೊಮ್ಮಗಳ ಆನ್‌ಲೈನ್ ಕ್ಲಾಸಿಗಾಗಿ ಮೊಬೈಲ್‌ ಬೇಕಿದೆ. ಎರಡು ಸಾವಿರ ರೂಪಾಯಿ ಕೊಟ್ಟು ಮೊಬೈಲ್ ತಂದು ಕೊಡ್ತೀಯಾ ಎಂದು ಮುಗ್ದವಾಗಿ ಕೇಳಿದಾಗ ಅವರಿಗೆ ಮನಸ್ಸು ಕರಗಿದೆ.


ಹೀಗಾಗಿ ಈ ವಿಚಾರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡ ಭಾರತಿ ಅವರು ಈ ಕುಟುಂಬಕ್ಕೆ ಸಹಾಯ ಮಾಡುವಂತೆ ತಮ್ಮ ಸ್ನೇಹಿತರಲ್ಲಿ ಮನವಿ ಮಾಡುತ್ತಾರೆ. ಈ ಸಂಬಂಧ ಭಾರತಿ ಅವರು ಹಾಕಿದ ಫೇಸ್‌ಬುಕ್ ಪೋಸ್ಟ್ ಹಲವರು ಸಹಾಯ ಮಾಡುವಂತೆ ಮಾಡಿದೆ.

‘ನಮ್ಮ ಮನೆ ಹತ್ರ ಒಂದು‌ ಬಡ ಕುಟುಂಬವಿದೆ. ಮನೆಯಲ್ಲಿ ಇತ್ತೀಚೆಗೆ ದುಡಿಯೊಕೆ ಹೊಗ್ತಿರೊ ಒಬ್ಬ ಹುಡುಗ (ನನ್ನ ಮಗನ ಪ್ರಾಯದ) ಬಿಟ್ರೆ ಬೇರೆ ಗಂಡಸರಿಲ್ಲ. ಓಟು ಒತ್ತುವಾಗ ಬೇಕಾದ್ರೆ ಸಿಕ್ಕಾಪಟ್ಟೆ ಜನ ಬಂದು ಕೆಲವು ಭರವಸೆಗಳನ್ನು ಕೊಟ್ಟು ಹೋಗ್ತಾರೆ. ಅವರ ಮನೆಯು ಶಿಥಿಲಾವಸ್ಥೆಯಲ್ಲಿದ್ದು ಆ ಮನೆ ಸಿಮೆಂಟ್ ಕಾಣದೆ 35 ವರ್ಷಗಳಾಯ್ತು. ಸರಿಯಾಗಿ ದುಡಿಯುವ ಕೈಗಳಿಲ್ಲ ಆ ಮನೆಯಲ್ಲಿ. ಇವತ್ತು ಬೆಳಗ್ಗೆ ಆ ಮನೆಯ ಅಮ್ಮ ಬಂದು ತನ್ನ ಮೊಮ್ಮಗಳ online ಕ್ಲಾಸಿಗಾಗಿ ಮೊಬೈಲ್ ಬೇಕು ಅಂತಿದ್ದಾಳೆ ಎರಡು ಸಾವಿರಕ್ಕೆ ಒಂದು ತಂದು ಕೊಟ್ತಿಯಾ ನನ್ನಲ್ಲಿ ಬೇರೆ ದುಡ್ಡಿಲ್ಲ ಅಂದ್ರು. ಆ ಹಣದಲ್ಲಿ ಅಂಥ ಮೊಬೈಲ್ ಸಿಗಲ್ಲ ಕಾಣ್ಬೇಕು ಅಂದೆ. ಹಾಗೆ ಮೊಬೈಲ್ ಅಂಗಡಿಗೆ ಕಾಲ್ ಮಾಡಿ ವಿಚಾರಿಸಿದೆ. ಕಮ್ಮಿಯ ಮೊಬೈಲ್ ಅಂದ್ರೂ ಏಳು ಸಾವಿರ ಇದೆ ಅಂದ.

ತಲೆ ಬಿಸಿ ಮಾಡ್ಕೊಂಡು ಆಕೆ ಮನೆಗೆ ಹೊದ್ರು. ಸ್ವಲ್ಪ ಹೊತ್ತಲ್ಲಿ ಮತ್ತೆ ಬಂದು ಮಗಳ ಕಿವಿದ್ದು ತುಂಡಾಗಿದೆ ಅದನ್ನು ನೀನೆ ಮಾರಿ ಒಂದು ಮೊಬೈಲ್ ತಂದು ಕೊಡ್ತಿಯಾ ಅಂದ್ರು. ನನ್ನ ಕಣ್ಣಂಚು ಒದ್ದೆಯಾಯಿತು. ಈ ಕೊರೋನಾ ಹಾಗೂ ಸರಕಾರ ಬಡವರನ್ನು ಮನೆಯಿಂದ ಎಳೆದು ತಂದು ಬೀದಿಗೆ ಹಾಕಿ ಬೇಕಿದ್ದರೆ ಬದುಕಿಕೋ ಅಂದ ಹಾಗಿದೆ. ದಯವಿಟ್ಟು ವಿಶಾಲ ಹೃದಯದವರು ಯಾರಾದರು ಇದ್ದರೆ ಆ ಮನೆಯವರಿಗೆ ಸ್ವಲ್ಪ ಸಹಾಯ ಮಾಡುವಿರಾ. ಮಾಡುವಿರೆಂದಾದರೆ ಅವರಲ್ಲಿ ಕೇಳಿ ಅವರ ಬ್ಯಾಂಕ್ ಅಕೌಂಟ್ ನಂಬರ್ ಹಾಕುವೆ. ಇಲ್ಲಿ ನೀವು ಕೊಟ್ಟಿರುವ ಸಹಾಯ ಅವರ ಜೀವನಕ್ಕೂ ಸಹಾಯ ಆದೀತು.’ ಹೀಗಂತಾ ಭಾರತಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು.

ತಕ್ಷಣ ಅವರ ಮನವಿಗೆ ಸ್ಪಂದಿಸಿದ ಹತ್ತಾರು ಜನ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದ್ದಾರೆ. ಪರಿಣಾಮ ಆ ಬಡಕುಟುಂಬದ ವಿದ್ಯಾರ್ಥಿನಿಗೆ ಉತ್ತಮ ಗುಣಮಟ್ಟದ ಮೊಬೈಲ್ ಕೊಡಿಸಲು ಸಾಧ್ಯವಾಗಿದೆ. ಈ ಸಂಬಂಧ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಮೊಬೈಲ್ ಅಂಗಡಿ ಮಾಲೀಕ ಶಾಹುಲ್ ಕಾಸೀಮ್, ‘ಇಂದು ನಮ್ಮಂಗಡಿಗೆ ಮೊಬೈಲ್ ಖರೀದಿಗಾಗಿ ಲೀಲಾ ಎಂಬುವವರನ್ನು ಭಾರತಿ ಮೇಡಂ ಕರೆ ತಂದಿದ್ದರು‌.ನನ್ನ ಗಳಿಕೆಯ ಒಂದಂಶವನ್ನು ಸೇರಿಸಿ ಸುಮಾರು 9 ಸಾವಿರ ಬೆಲೆಯ ಉತ್ತಮ ಗುಣಮಟ್ಟದ ವಿವೋ ಮೊಬೈಲ್ ಖರೀದಿಸಿದರು. ದಾನಿಗಳ ಸಹಕಾರದಿಂದ ಮೊಬೈಲ್ ಕೊಡಿಸಿದ ಭಾರತಿ ಮೇಡಂ ಹಾಗೂ ಸ್ಪಂದಿಸಿದ ಎಲ್ಲಾ ಮಿತ್ರರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

Facebook Comments

comments