LATEST NEWS
ಬಿಜೆಪಿಯಿಂದ ಕೊರೊನಾ ಲಸಿಕೆ ಮಾಫಿಯಾ – ಐವನ್ ಡಿಸೋಜಾ ಆರೋಪ
ಮಂಗಳೂರು ಮೇ 29: ಕೊರೊನಾ ಲಸಿಕೆ ವಿಚಾರದಲ್ಲಿ ಬಿಜೆಪಿ ಮಾಫಿಯಾ ನಡೆಸುತ್ತಿದ್ದು, ಸಾರ್ವಜನಿಕರಿಗೆ ನೀಡಬೇಕಾದ ಲಸಿಕೆಗಳನ್ನು ತಮ್ಮ ಬೆಂಬಲಿಗೆ ಮಾರಾಟ ಮಾಡುತ್ತಿದೆ ಎಂದು ಮಾಜಿ ವಿಧಾನಾಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜನರು ಕೊರೊನಾ ಲಸಿಕೆ ಪಡೆಯಲು ಮುಂಜಾನೆ 4 ಗಂಟೆಗೆ ಲಸಿಕಾ ಕೇಂದ್ರಗಳಿಗೆ ಆಗಮಿಸುತ್ತಿದ್ದು, ಆಗಮಿಸಿದ ಜನರಿಗೆ ಲಸಿಕೆ ನೀಡದೇ ಈ ಬಿಜೆಪಿ ಪ್ರತಿನಿಧಿಗಳು ತಮ್ಮ ಸಂಬಂಧಿಕರನ್ನು ಅಥವಾ ಅವರಿಗೆ ತಿಳಿದಿರುವ ವ್ಯಕ್ತಿಗಳನ್ನು ಲಸಿಕೆಗಾಗಿ ಕರೆತರುತ್ತಾರೆ. ಕೂಪನ್ 200 ರೂ.ಗೆ ವಾಮಂಜೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಅಂಶವೂ ಗಮನಕ್ಕೆ ಬಂದಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯ ಆಡಳಿತ ವೈಫಲ್ಯ, ಭ್ರಷ್ಟಚಾರದ ತಂತ್ರಗಳು, ಆರ್ಥಿಕವಾಗಿ ಹಿಂದುಳಿದವರ ಜೀವವನ್ನು ಬಲಿದಾನ ತೆಗೆದುಕೊಳ್ಳುತ್ತಿದೆ. ಇದನ್ನು ವಿರೋಧಿಸಿದರೆ ರಾಜಕೀಯ ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ವತಿಯಿಂದ ನೀಡುವ ಲಸಿಕೆಗೆ ಸೇವಾಶುಲ್ಕ 100ರಿಂದ 200ಕ್ಕೆ ಏರಿಸಲಾಗಿದೆ, ಇದರ ಹಿಂದಿರುವ ತಂತ್ರವೇನು? ಕೊರೊನಾ ಸಂದರ್ಭದಲ್ಲಿ ಜನರಿಗೆ ಸೌಕರ್ಯ ಒದಗಿಸುವ ಹೊರತು ಅವರ ಮೇಲೆ ಹೆಚ್ಚಿನ ಆರ್ಥಿಕ ಒತ್ತಡ ಹಾಕುತ್ತಿರುವುದು ಸರಿಯೇ? ಎಂದು ಪ್ರಶ್ನಿಸಿದ್ದಾರೆ.