BANTWAL
ನೀವು ನನ್ನ ಮೇಲೆ ಕೈ ಹಾಕಬೇಡಿ, ನಾನು ನಿಮ್ಮನ್ನು ನೆನಪಿಟ್ಟುಕೊಳ್ಳುತ್ತೇನೆ ಪೊಲೀಸ್ ಅಧಿಕಾರಿಗೆ ರಮಾನಾಥ ರೈ ವಾರ್ನಿಂಗ್
ಬಂಟ್ವಾಳ ಜನವರಿ 30: ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪರಿಶೀಲನೆಗೆ ಆಗಮಿಸಿದ ಮಾಜಿ ಶಾಸಕ ರಮಾನಾಥ ರೈ ಅವರನ್ನು ತಡೆದ ನೆಪದಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭ ಪೊಲೀಸ್ ಅಧಿಕಾರಿಯೊಬ್ಬರಿಗೆ ರಮಾನಾಥ ರೈ ಅವಾಜ್ ಹಾಕಿದ್ದಾರೆ.
ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಾಳೆ ಉದ್ಘಾಟನೆಯಾಗಲಿದ್ದು, ಇಂದು ಯೋಜನೆಯ ಪರಿಶೀಲನೆಗೆ ಬಿಜೆಪಿ ಹಾಗೂ ಕಾಂಗ್ರೇಸ್ ನ ನಾಯಕರುಗಳು ಆಗಮಿಸಿದ್ದರು. ಈ ಸಂದರ್ಭ ಪೊಲೀಸರು ಕೇವಲ ಅಧಿಕಾರಿಗಳಿಗೆ ಮಾತ್ರ ಅವಕಾಶ ಎಂದು ಹೇಳಿದರೂ ಕೇಳದೆ ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರು ವಾಗ್ದಾವ ನಡೆಸಿದರು.
ಕಾಂಗ್ರೇಸ್ ಹಾಗೂ ಬಿಜೆಪಿ ಕಾರ್ಯಕರ್ತರ ಘರ್ಷಣೆ ತಡೆಯಲು ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಮಾಜಿ ಶಾಸಕ ರಮಾನಾಥ ರೈ ನೀವು ನನ್ನ ಮೇಲೆ ಕೈ ಹಾಕಬೇಡಿ, ನಾನು ನಿಮ್ಮನ್ನು ನೆನಪಿಟ್ಟುಕೊಳ್ಳುತ್ತೇನೆ ಎಂದು ಅವಾಜ್ ಹಾಕಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅವಕಾಶ ನೀಡಿ ಎಂದು ಪೊಲೀಸ್ ಅಧಿಕಾರಿಗಳು ಕೇಳಿದರು ಜನಪ್ರತಿನಿಧಿಗಳು ಕೇಳದೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಒಂದು ಹಂತದಲ್ಲಿ ಮಾತಿನ ಚಕಮಕಿಗಳು ತಾರಕಕ್ಕೇರಿದ ಸಂದರ್ಭ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಸರ್ಕಲ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್ ಎರಡೂ ತಂಡಗಳ ನಡುವೆ ಮಾತುಕತೆ ನಡೆಸಿ, ಪರಿಸ್ಥಿತಿಯನ್ನು ತಿಳಿಯಾಗಿಸಿದರು. ಬಿಜೆಪಿ ಕಾರ್ಯಕರ್ತರು ಗೇಟ್ ಮುಂಭಾಗದಿಂದ ತೆರಳಿದ ಬಳಿಕ ಸ್ಥಳದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಇದೊಂದು ರಾಜಕೀಯ ಪ್ರೇರಿತ ಘಟನೆಯಾಗಿದ್ದು, ಜನಪ್ರತಿನಿಧಿಗಳಿಗೂ ಒಳಗೆ ಪ್ರವೇಶಿಸದಂತೆ ಮಾಡಿರುವುದು ಸರಿಯಲ್ಲ ಎಂದರು.