LATEST NEWS
ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಖಾದರ್ ವಿರುದ್ದ ತೊಡೆತಟ್ಟಿದ ಅಶ್ರಫ್

ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಖಾದರ್ ವಿರುದ್ದ ತೊಡೆ ತಟ್ಟಿದ ಅಶ್ರಫ್
ಮಂಗಳೂರು ಏಪ್ರಿಲ್ 24: ಜಿಲ್ಲೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಮೇಯರ್ ಆಶ್ರಫ್ ಇಂದು ನಾಮಪತ್ರ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಮಾಜಿ ಮೇಯರ್ ಅಶ್ರಫ್ ತಮ್ಮ ನೂರಾರು ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಬಂದು ಮಂಗಳೂರಿನ ತಾಲೂಕು ಪಂಚಾಯತ್ ಕಚೇರಿಯಲ್ಲಿರುವ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.

ಮಂಗಳೂರು ಕ್ಷೇತ್ರದ ಹಾಲಿ ಶಾಸಕ ಯು.ಟಿ ಖಾದರ್ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿರುವ ಜೆಡಿಎಸ್ ಮುಖಂಡ ಬಿ.ಎಂ. ಫಾರೂಕ್, ಮಾಜಿ ಮೇಯರ್ ಕೆ. ಅಶ್ರಫ್ ಅವರನ್ನು ಕಣಕ್ಕಿಳಿಸುವ ಮೂಲಕ ಯು.ಟಿ ಖಾದರ್ ವಿರುದ್ದ ತೊಡೆ ತಟ್ಟಿದ್ದಾರೆ.
ಮುಸ್ಲಿಂ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಖಾದರ್ ಅವರನ್ನು ಮಣಿಸಲು ಈ ಇಬ್ಬರು ರಣತಂತ್ರ ರೂಪಿಸಿರುವುದು ಖಾದರ್ ಅವರಿಗೆ ಮುಳುವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. ಈ ಕಾರಣದಿಂದಲೇ ಖಾದರ್ ಅಶ್ರಫ್ ಅವರಿಗೆ ಜೆಡಿಎಸ್ ಬಿ ಫಾಂರ ನೀಡದಂತೆ ಒತ್ತಡ ಹೇರಿದ್ದರು ಎಂದು ಹೇಳಲಾಗಿತ್ತು. ಆದರೆ ಕೆ. ಅಶ್ರಫ್ ಒಂದು ವೇಳೆ ಜೆಡಿಎಸ್ ಟಿಕೆಟ್ ನೀಡದಿದ್ದಲ್ಲಿ ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತೆನೆ ಎಂದು ಘೋಷಿಸಿದ್ದರು.
ಈ ನಡುವೆ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚಿಂತನೆ ನಡೆಸಿ ಜೆಡಿಎಸ್ ಅಶ್ರಫ್ ಅವರಿಗೆ ಟಿಕೆಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಖಾದರ್ ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಗಾರಿಕೆ ಅರಂಭಿಸಿದ್ದಾರೆ. ಅಶ್ರಫ್ ಸ್ಪರ್ಧೆಯಿಂದ ಮಂಗಳೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳ್ಯಾರ್ ಅವರಿಗೆ ವರದಾನ ವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಎಲ್ಲಾ ಲೆಕ್ಕಾಚಾರಕ್ಕೆ ಮತದಾರ ಪ್ರಭು ಹೇಗೆ ಪ್ರತಿಕ್ರಿಯಿಸಲಿದ್ದಾನೆ ಎನ್ನುವುದೇ ಕುತೂಹಲದ ಸಂಗತಿಯಾಗಿದೆ.