LATEST NEWS
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಮಂಗಳೂರಿನಲ್ಲಿ ಆತ್ಮಹತ್ಯೆ ? ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ..!!
ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಮಂಗಳೂರಿನಲ್ಲಿ ಆತ್ಮಹತ್ಯೆ ? ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ..!!
ಮಂಗಳೂರು, ಜುಲೈ. 30 : ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಮಂಗಳೂರಿನ ತೊಕ್ಕೋಟ್ ನೇತ್ರಾವತಿ ಸೇತುವೆ ಮೇಲಿನಿಂದ ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮಾಹಿತಿ ಪ್ರಕಾರ, ಸಕಲೇಶಪುರದತ್ತ ತೆರಳುತ್ತಿದ್ದ ಸಿದ್ಧಾರ್ಥ್, ಕಾರು ಚಾಲಕನಲ್ಲಿ ಏಕಾಏಕಿ ಮಂಗಳೂರು ಪಂಪ್‌ವೆಲ್ ಕಡೆ ತಿರುಗಿಸುವಂತೆ ಹೇಳಿದ್ದರು.
ಪಂಪ್‌ವೆಲ್ ತಲುಪಿದ ಬಳಿಕ ನೇತ್ರಾವತಿ ಸೇತುವೆ ಬಳಿ ತೆರಳುವಂತೆ ತಿಳಿಸಿದ್ದರು. ರಾತ್ರಿ ಸುಮಾರು 7.30ರಿಂದ 8ರ ನಡುವೆ ಸ್ಥಳಕ್ಕೆ ತೆರಳಿದ್ದು, ಸೇತುವೆ ತುದಿಯಲ್ಲಿ ಡ್ರೈವರ್‌ಗೆ ಕಾರು ನಿಲ್ಲಿಸಲು ಸೂಚಿಸಿದ್ದರು. ಅಲ್ಲಿ ಕಾರಿನಿಂದ ಕೆಳಗಿಳಿದಿದ್ದು, ನಂತರ ಮಂಗಳೂರಿನಿಂದ ತೊಕ್ಕೋಟು ಕಡೆ ಸಾಗುವ ಸೇತುವೆ ಒಂದು ಭಾಗದಲ್ಲಿ ಉದ್ದಕ್ಕೂ ಮೊಬೈಲ್‌ನಲ್ಲಿ ಮಾತಾಡಿಕೊಂಡು ನಡೆದಿದ್ದರು. ಆ ಬಳಿಕ ಸೇತುವೆ ಮತ್ತೊಂದು ಭಾಗ ತೊಕ್ಕೋಟ್‌ನಿಂದ ಮಂಗಳೂರು ಕಡೆ ಬರೋ ದಾರಿಯಲ್ಲಿ ಸೇತುವೆಯ ಮಧ್ಯಭಾಗದಿಂದಲೇ ನಾಪತ್ತೆಯಾಗಿದ್ದಾರೆ. ಘಟನೆಯ ವೇಳೆ ಮಳೆ ಸುರಿಯುತ್ತಿದ್ದದ್ದರಿಂದ ಸಿದ್ದಾರ್ಥ್ ಉದ್ದಕ್ಕೆ ಮಾತಾಡಿಕೊಂಡು ಯಾವ ಕಡೆ ತೆರಳಿದ್ದಾರೆಂದು ಅವರ ಇನ್ನೋವಾ ಚಾಲಕನಿಗೂ ಮಾಹಿತಿ ದೊರೆತಿರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೆ ಮೊಬೈಲ್ ಕೂಡಾ ಸ್ವಿಚ್‌ಆಫ್ ಬರುತ್ತಿತ್ತು. ಸಾಕಷ್ಟು ಹುಡುಕಾಡಿದ ಬಳಿಕ ಮನೆಯವರಿಗೆ ಚಾಲಕ ಮಾಹಿತಿ ನೀಡಿದ್ದು, ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್‌ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿದ್ದ ಕಮಿಷನರ್ ಸೂಚನೆಯಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀ ಗಣೇಶ್, ಎಸಿಪಿ ಶ್ರೀನಿವಾಸ್ ಸಿಬ್ಬಂದಿ, ಅಗ್ನಿಶಾಮಕದಳಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ. ಡಾಗ್ ಸ್ಕ್ವಾಡ್ ಸೇತುವೆಯುದ್ದಕ್ಕೂ ಹುಡುಕಾಟ ನಡೆಸಿಕೊಂಡು ಬಂದು ಸೇತುವೆ ಮಧ್ಯಭಾಗದಲ್ಲಿ ನದಿಯೆಡೆ ಮುಖಮಾಡಿ ಸೂಚನೆ ನೀಡಿದೆ.
ಸಿದ್ಧಾರ್ಥ್ ನಾಪತ್ತೆ ಬಳಿಕ ಕಾರು ಚಾಲಕ ಹೆದರಿಕೊಂಡಿದ್ದು, ಕಾರನ್ನು ಪೊಲೀಸರು ಕೊಂಡೊಯ್ದಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಭೇಟಿ ನೀಡಿ ಹಿಂತಿರುಗಿದ್ದರು. ಸೇತುವೆ ಮಧ್ಯದಿಂದ ನೀರಿಗೆ ಹಾರಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ರಾತ್ರಿ ಒಂದು ಬೋಟನ್ನು ಕಾರ್ಯಾಚರಣೆ ನಡೆಸಲು ಬಿಡಲಾಗಿದೆ. ನೀರಿನ ಸೆಳೆತ ಭಾರೀ ಜೋರಾಗಿರುವುದರಿಂದ ಇಂದು ಮುಂಜಾನೆಯಿಂದಲೇ ಮತ್ತೆ ಬೋಟ್‌ಗಳ ಮೂಲಕ ಕಾರ್ಯಾಚರಣೆ ಆರಂಭಿಸಲಾಗಿದೆ.. ಒಂದು ವೇಳೆ ನದಿಗೆ ಹಾರಿದ್ದಲ್ಲಿ ಅಳಿವೆ ಬಾಗಿಲು ಅಥವಾ ದಡದ ಬಳಿ ಶವ ದೊರೆಯುವ ಬಗ್ಗೆ ಪೊಲೀಸರ ಅಂದಾಜು ವ್ಯಕ್ತಪಡಿಸಿದ್ದು, ಹಣದ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.ದೇಶದಾದ್ಯಂತ ಹೊಂದಿರುವ ಕಾಫಿ ಡೇ ಮಾಲಕನಾಗಿರುವ ಸಿದ್ಧಾರ್ಥ್, ಬ್ಯುಸಿನೆಸ್ ವಿಚಾರವಾಗಿ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ.