KARNATAKA
ಚಿಕ್ಕಮಕ್ಕಳ ಎದುರು ಬಿಗ್ ಬಾಸ್ ನಂತಹ ಕಾರ್ಯಕ್ರಮಗಳನ್ನ ನೋಡಬೇಡಿ – ಮಾಜಿ ಬಿಗ್ ಬಾಸ್ ಸ್ಪರ್ಧಿ

ಬೆಂಗಳೂರು ನವೆಂಬರ್ 02: ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾಗಿ ಮೂರು ವಾರ ಕಳೆದಿದ್ದು, ಈ ವಾರ ಸಂಪೂರ್ಣ ಗಲಾಟೆಯಲ್ಲೇ ಬಿಗ್ ಬಾಸ್ ನಡೆಯುತ್ತಿದ್ದು, ಸ್ಪರ್ಧಿಗಳು ತೀರಾ ಕೆಳಮಟ್ಟದ ಪದಗಳನ್ನು ಬಳಸಿ ಜಗಳವಾಡುತ್ತಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಈಗಾಗಲೇ ಭಾರೀ ಕುತೂಹಲ ಮೂಡಿಸಿರುವ ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ನಡೆಯುವ ಗಲಾಟೆ ಮಾತ್ರ ಈ ಬಾರಿ ಹೈಲೆಟ್ ಆಗಿದೆ. ಕೆಲ ಸ್ಪರ್ಧಿಗಳು ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಕೆಲವರು ಈಗಾಗಲೇ ಬೀಪ್ ಹಾಕಿಸಿಕೊಂಡಿದ್ದಾರೆ. ಮಹಿಳಾ ಸ್ಪರ್ಧಿಗಳಿಗೆ ಗೌರವ ನೀಡದೆ ಏಕವಚನದ ಪ್ರಯೋಗವೂ ಮಾಡಲಾಗದೆ. ಸಿಟ್ಟಿನ ಭರದಲ್ಲಿ ಆಡಲಾದ ಕೆಲ ಮಾತುಗಳು.. ಫ್ಯಾಮಿಲಿ ಆಡಿಯೆನ್ಸ್‌ಗೆ ಇರುಸು ಮುರುಸು ತಂದಿದೆ.
ಹೀಗಿರುವಾಗಲೇ.. ಈ ಬಾರಿಯ ‘ಬಿಗ್ ಬಾಸ್’ ಸೀಸನ್ ಬಗ್ಗೆ ನಟಿ ಹಾಗೂ ಮಾಜಿ ‘ಬಿಗ್ ಬಾಸ್’ ಸ್ಪರ್ಧಿ ಕಾವ್ಯ ಶಾಸ್ತ್ರಿ ಬೇಸರ ವ್ಯಕ್ತಪಡಿಸಿದ್ದಾರೆ. ‘’ಚಿಕ್ಕಮಕ್ಕಳ ಎದುರು ಇಂತಹ ಕಾರ್ಯಕ್ರಮಗಳನ್ನ ನೋಡಬೇಡಿ’’ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ ನಟಿ ಕಾವ್ಯ ಶಾಸ್ತ್ರಿ.

‘’ಈ ಸಲದ ಕನ್ನಡದ ಬಿಗ್ ಬಾಸ್ ಸೀಸನ್ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣು ಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರುಧ್ವನಿಯಲ್ಲಿ ಗದರುವುದು, ಹೆದರಿಸುವುದು ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ – ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ. ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ’’ ಎಂದು ಕಾವ್ಯ ಶಾಸ್ತ್ರಿ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
‘’ಸೂಚನೆ: ನಾನು ಯಾವುದೇ ಶೋಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಇದು ಚಿಕ್ಕಮಕ್ಕಳಿರುವ ತಂದೆ-ತಾಯಂದಿರಿಗೆ ಅರಿವು ಮೂಡಿಸುವ ಪ್ರಯತ್ನ ಅಷ್ಟೇ. ಯಾವುದೇ ಶೋ ಇರಲಿ, ಸೀರಿಯಲ್‌ಗಳಾಗಲಿ.. ವೀಕ್ಷಿಸಲು ಸೂಕ್ತವಾದ ವಯಸ್ಸಿನ ವರ್ಗದ ಬಗ್ಗೆ ಡಿಸ್ಕ್ಲೇಮರ್ ಹಾಕಲಾಗುತ್ತದೆ. ಆದರೆ ಅದನ್ನ ನಿರ್ಲಕ್ಷ್ಯ ಮಾಡಿ, ನಮ್ಮ ನಮ್ಮ ಮನೆಗಳಲ್ಲಿ ಕಾರ್ಯಕ್ರಮಗಳನ್ನ ನಾವು ಪ್ಲೇ ಮಾಡುತ್ತೇವೆ. ನಿಮ್ಮ ಮಗು ಪ್ರಜ್ಞಾಪೂರ್ವಕವಾಗಿ ಕುಳಿತು ನಕಾರಾತ್ಮಕ ವಿಷಯವನ್ನು ವೀಕ್ಷಿಸದಿದ್ದರೂ, ಕೇವಲ ಆಡಿಯೋ ಕೂಡ ಮಗುವಿನ ಮೇಲೆ ಪರಿಣಾಮ ಬೀರಬಹುದು. ದಯವಿಟ್ಟು ನಿಮ್ಮ ಎನರ್ಜಿ ಹಾಗೂ ಮಗುವಿನ ಬಗ್ಗೆ ಕಾಳಜಿ ವಹಿಸಿ’’ ಎಂದೂ ಸಹ ಕಾವ್ಯ ಶಾಸ್ತ್ರಿ ಬರೆದುಕೊಂಡಿದ್ದಾರೆ