LATEST NEWS
ಬಿಜೆಪಿ ಸಿದ್ದಾಂತಗಳೊಂದಿಗೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ : ಶ್ರೀಕರ ಪ್ರಭು
ಬಿಜೆಪಿ ಸಿದ್ದಾಂತಗಳೊಂದಿಗೆ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧೆ : ಶ್ರೀಕರ ಪ್ರಭು
ಮಂಗಳೂರು, ಮಾರ್ಚ್ 25 : ರಾಜಕೀಯವಾಗಿ ನನ್ನನ್ನು ಕೊಲೆ ಮಾಡಿದ್ದಾರೆ. ಕಾರಣ ಕೊಡದೆ ಏಕಾಎಕಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಯಾಕೆ ?
ಆದ್ದರಿಂದ ಈ ಬಾರಿ ಬಿಜೆಪಿ ಸಿದ್ದಾಂತಗಳೊಂದಿಗೆ ಪಕ್ಷೇತರನಾಗಿ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತೇನೆ ಎಂದು ಬಿಜೆಪಿಯ ಮಾಜಿ ಮುಖಂಡ ಶ್ರೀಕರ ಪ್ರಭು ಗುಡುಗಿದ್ದಾರೆ.
ಮಂಗಳೂರಿನ ಸಿ ವಿ ನಾಯಕ್ ಹಾಲ್ ನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣಾ ಪೂರ್ವ ಜನ ಸಂಪರ್ಕ ಕಚೇರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ಎಂದೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ.
ಬಾಲ್ಯದಿಂದಲೂ ಸಂಘ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರೀಯನಾಗಿ ಭಾಗವಹಿಸುತ್ತಿದ್ದೆ.
ಆದರೆ 2014 ರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಕಾರಣ ಕೊಡದೆ ಏಕಾಎಕಿ ಪಕ್ಷದಿಂದ ಉಚ್ಛಾಟಿಸಿದ್ದಾರೆ.
ತಾಯಿಗೆ ದ್ರೋಹ ಮಾಡುವ ಜಾಯಮಾನ ನನಗಿಲ್ಲ ಎಂದ ಅವರು ಬಿಜೆಪಿ ಸಿದ್ಧಾಂತ ಹಿಡಿದೇ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ.
ಬಿಜೆಪಿ ಪಕ್ಷದ ಬಗ್ಗೆ ಕೋಪ ಇಲ್ಲ, ಆದರೆ ವ್ಯವಸ್ಥೆ ಬಗ್ಗೆ ಆಕ್ರೋಶ ಇದೆ ಎಂದ ಶ್ರೀಕರ ಪ್ರಭು ಅವರು ಬಿಜೆಪಿಯಿಂದ ಉಚ್ಚಟಿಸಲು ಯಾರಿಗೂ ಸಾಧ್ಯವಿಲ್ಲ. ಜೀವನದ ಕೊನೆಯ ವರೆಗೂ ಬಿಜೆಪಿ ಕಾರ್ಯಕರ್ತನಾಗಿಯೇ ಇರುತ್ತೇನೆ ಮತ್ತು ಇಲ್ಲಿಯೇ ಸಾಯುತ್ತೇನೆ ಎಂದರು.
ಈ ಚುನಾವಣೆ ಸ್ವಯಂಸೇವಕರ ಗೌರವದ ಸಂಕೇತ. ನಿಮ್ಮ ಬೆಂಬಲ ರಾಜಕೀಯ ಪುನರ್ಜನ್ಮ ನೀಡಬಹುದು ಎಂದ ಅವರು ತಮಗೆ ಸಂಪೂರ್ಣ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಶ್ರೀಕರ ಪ್ರಭು ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.
ಅನೇಕರು ವೇದಿಕೆ ಹತ್ತಿ ಚುನಾವಣೆಯಲ್ಲಿ ಶ್ರೀಕರ ಪ್ರಭು ಅವರನ್ನು ಬೆಂಬಲಿಸುವುದಾಗಿ ಬಹಿರಂಗವಾಗಿ ಘೋಷಿಸಿದರು.
ಶ್ರೀಕರ ಪ್ರಭು ಅವರ ಈ ನಿಲುವು ಬಿಜೆಪಿಗೆ ನುಂಗಲಾರದ ತುತ್ತಾದರೆ, ಈ ವಿದ್ಯಮಾನ ಕಾಂಗ್ರೆಸ್ ಪಾಲಿಗೆ ಖುಶಿ ತಂದದ್ದು ಮಾತ್ರ ಸುಳ್ಳಲ್ಲ.
ವಿಡಿಯೋಗಾಗಿ…
You must be logged in to post a comment Login