Connect with us

  LATEST NEWS

  ಕೇರಳ – ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ ವಿಧಿಸಿದ್ದ ಜಡ್ಜ್ ಗೆ ಕೊಲೆ ಬೆದರಿಕೆ

  ಆಲಪ್ಪುಳ ಫೆಬ್ರವರಿ 2 : ಕೇರಳದಲ್ಲಿ ನಡೆದ ರಾಜಕೀಯ ಕೊಲೆ ಪ್ರಕರಣದಲ್ಲಿ ಪಿಎಫ್ಐ ಕಾರ್ಯಕರ್ತರಿಗೆ ಮರಣದಂಡನೆ ತೀರ್ಪು ನೀಡಿದ ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿದ ಘಟನೆ ನಡೆದಿದ್ದು, ಇದೀಗ ಈ ಆರೋಪದ ಮೇಲೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


  ಬಂಧಿತರನ್ನು ಮನ್ನಾಚೆರಿ ನಿವಾಸಿ ನಸೀರ್‌ಮನ್‌ (47), ಮಂಗಳಪುರಂ ನಿವಾಸಿ ರಫಿ (38), ಆಲಪ್ಪುಳದ ನವಾಸ್‌ ನೈನಾ (42) ಮತ್ತು ಅಂಬಾಲಪ್ಪುಳದ ಶಾಜಹಾನ್‌ (36) ಎಂದು ಗುರುತಿಸಲಾಗಿದೆ. ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶೆ ವಿ.ಜಿ. ಶ್ರೀದೇವಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದು ಬಂದಿದ್ದು, ಅವರಿಗೆ ಭದ್ರತೆ ಹೆಚ್ಚಿಸಲಾಗಿದೆ. ನ್ಯಾಯಾಧೀಶರಿಗೆ ಬೆದರಿಕೆ ಒಡ್ಡಿರುವುದಕ್ಕೆ ಸಂಬಂಧಿಸಿದಂತೆ ಒಟ್ಟು ಐದು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ ಎಂದು ಆಲಪ್ಪುಳ ಜಿಲ್ಲಾ ಪೊಲೀಸ್‌ ಮುಖ್ಯಸ್ಥರು ಗುರುವಾರ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

  ‘ಆಲಪ್ಪುಳ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ನಾಲ್ಕು ಮತ್ತು ಪುನ್ನಾಪ್ರ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. 2021ರಲ್ಲಿ ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ ರಂಜಿತ್‌ ಶ್ರೀನಿವಾಸನ್‌ ಅವರನ್ನು, ಅವರ ಕುಟುಂಬರವರ ಎದುರೇ ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ 15 ಮಂದಿಗೆ ನ್ಯಾಯಾಲಯವು ಮಂಗಳವಾರ (ಜನವರಿ 30) ಮರಣದಂಡನೆ ವಿಧಿಸಿದೆ. ಆದೇಶದ ಬೆನ್ನಲ್ಲೇ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಲಾಗಿದೆ. ವಕೀಲರೂ ಆಗಿದ್ದ ಶ್ರೀನಿವಾಸನ್‌ ಅವರನ್ನು, 2021ರ ಡಿಸೆಂಬರ್ 19ರಂದು ಅವರ ಮನೆಯಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

  Share Information
  Advertisement
  Click to comment

  You must be logged in to post a comment Login

  Leave a Reply