LATEST NEWS
ಲೋಕಲ್ ಬ್ರ್ಯಾಂಡ್ ನ ಬೆಲೆ ಜಾಸ್ತಿ ಮಾಡ್ಬೇಡಿ – ಮದ್ಯಪ್ರಿಯ ಬ್ರದರ್ಸ್ ಸಿಸ್ಟರ್ಸ್ ಪರವಾಗಿ ವಿನಂತಿ…!!
ಮಂಗಳೂರು ಜೂನ್ 09: ರಾಜ್ಯ ಸರಕಾರ ತನ್ನ ಫ್ರೀ ಯೋಜನೆಗಳಿಗಾಗಿ ಮದ್ಯದ ಬೆಲೆ ಜಾಸ್ತಿ ಮಾಡಲಿದೆ ಎಂಬ ಪ್ರಸ್ತಾವಕ್ಕೆ ಇದೀಗ ರಾಜ್ಯ ಮದ್ಯಪ್ರೇಮಿಗಳ ಸಂಘವು ಆಕ್ಷೇಪ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸರ್ಕಾರದ ಶುಲ್ಕ ನಿಯಂತ್ರಣ ಸಮಿತಿ ಹಾಗೂ ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಇ–ಮೇಲ್ ಮೂಲಕ ಅಸಮಾಧಾನ ತೋಡಿಕೊಂಡಿದೆ.
‘ರಾಜ್ಯದಲ್ಲಿ ಜಾತಿ, ಧರ್ಮ, ಬಡವ, ಬಲ್ಲಿದ ಎಂಬ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ಮದ್ಯಪ್ರಿಯರು ಆಹಾರ ಸಂಸ್ಕೃತಿಯ ಭಾಗವಾಗಿ ಮದ್ಯ ಸೇವನೆ ಮಾಡುತ್ತಾರೆ. ಮದುವೆ, ಹಬ್ಬ ಹರಿದಿನ, ಆರಾಧನೆ ಹಾಗೂ ಸಂತೋಷ ಕೂಟಗಳಲ್ಲಿ ಮದ್ಯ ಸೇವಿಸುತ್ತಾರೆ. ಇದರಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಅಷ್ಟೂ ಆದಾಯವನ್ನು ವಿನಿಯೋಗಿಸುವ ಸರ್ಕಾರ, ಮದ್ಯಪ್ರೇಮಿಗಳ ಕುರಿತು ಕಾಳಜಿ ವಹಿಸದಿರುವುದು ದುಃಖಕರ’ ಎಂದು ಸಂಘವು ಹೇಳಿದೆ.
‘ಬಿಪಿಎಲ್ ಕಾರ್ಡು ಹೊಂದಿದ ಕಡಿಮೆ ಆದಾಯ ವರ್ಗದ ಮದ್ಯಪ್ರಿಯ ದಿನಗೂಲಿ ನೌಕರ ದಿನವೊಂದಕ್ಕೆ ಸರಾಸರಿ 180 ಮಿ.ಲೀ. ಮದ್ಯ ಕುಡಿದರೂ, ಆತನಿಗೆ ನಿತ್ಯ ₹ 200 ರಿಂದ ₹ 250 ಮದ್ಯಕ್ಕೆ ಖರ್ಚಾಗುತ್ತದೆ. ಇದರಿಂದ ತಿಂಗಳಿಗೆ ₹7500, ವರ್ಷಕ್ಕೆ ₹ 90,000 ವೆಚ್ಚವಾಗುತ್ತದೆ. ಇದರಿಂದ ಮಧ್ಯಮ ವರ್ಗ ಮತ್ತು ಬಡವರಿಗೆ ಆರ್ಥಿಕವಾಗಿ ಹೊರೆಯಾಗಲಿದೆ’ ಎಂದೂ ಸಂಘವು ತಿಳಿಸಿದೆ.
‘ಮದ್ಯದ ಮೇಲಿನ ಸುಂಕ ಹೆಚ್ಚಳ ಪ್ರಸ್ತಾವವನ್ನು ಪುನರ್ ಪರಿಶೀಲನೆ ಮಾಡಬೇಕು. ಸ್ಥಳೀಯ ಬ್ರ್ಯಾಂಡ್, ಭಾರತದಲ್ಲಿ ತಯಾರಾಗುವ ವಿದೇಶಿ ಮದ್ಯ ಹಾಗೂ ಬಿಯರ್ ಮೇಲಿನ ಸುಂಕ ಕಡಿಮೆ ಮಾಡಬೇಕು ಎಂದು ರಾಜ್ಯದ ಮದ್ಯಪ್ರಿಯರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದೆ.