LATEST NEWS
ಮಂಗಳೂರು – ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಕಡ್ಡಾಯ

ಮಂಗಳೂರು ಜುಲೈ 03: ಮಂಗಳೂರಿನಲ್ಲಿ ಆಟೋ ಚಾಲಕರ ನಡುವೆ ವಿವಾದಕ್ಕೆ ಕಾರಣವಾಗಿದ್ದ ಎಲೆಕ್ಟ್ರಿಕ್ ಆಟೋ ಮತ್ತು ಇನ್ನಿತರ ಆಟೋಗಳ ಪರ್ಮಿಟ್ ವಿವಾದ ಇದೀಗ ತಣ್ಣಗಾಗುವ ಹಂತಕ್ಕೆ ಬಂದಿದೆ. ಇಲ್ಲಿಯವರೆಗೆ ಎಲೆಕ್ಟ್ರಿಕ್ ಆಟೋಗಳು ಪರ್ಮಿಟ್ ಇಲ್ಲದೆ ಸಂಚರಿಸುವ ಅವಕಾಶ ಇತ್ತು, ಆದರೆ ಇದೀಗ ರಾಜ್ಯ ಸಾರಿಗೆ ಇಲಾಖೆ ಆಟೋ, ಟ್ಯಾಕ್ಸಿ ಸಹಿತ ವಾಣಿಜ್ಯ ಉದ್ದೇಶದ ಇ-ವಾಹನಗಳಿಗೆ ಪರ್ಮಿಟ್‌ನ ನಿಯಂತ್ರಣ ಹೇರಲು ರಾಜ್ಯ ಸಾರಿಗೆ ಇಲಾಖೆ ಮುಂದಾಗಿದೆ.
ರಾಜ್ಯದಲ್ಲಿ ಅತೀ ಹೆಚ್ಚು ಸುದ್ದಿಯಾಗಿದ್ದ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ವಿವಾದಕ್ಕೆ ಸಾರಿಗೆ ಇಲಾಖೆ ಹೊಸ ಕಾನೂನು ತಂದಿದೆ. 2022ರಿಂದ ಇದುವರೆಗೆ ಇ-ವಾಹನ ಗಳಿಗೆ ಪರ್ಮಿಟ್‌ಗಳ ಕಿರಿಕಿರಿ ಇರಲಿಲ್ಲ, ಇದ ರಿಂದಾಗಿ ಇ-ಆಟೋ ಮತ್ತು ಟ್ಯಾಕ್ಸಿಯವರು ಎಲ್ಲೆಂದರಲ್ಲಿಗೆ ಬಾಡಿಗೆ ಮಾಡುವುದು ಸಾಧ್ಯವಾಗಿತ್ತು. ಇದರ ವಿರುದ್ಧ ಮುಖ್ಯವಾಗಿ ಕರಾವಳಿಯಲ್ಲಿ ಆಟೋ ಚಾಲಕರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.
ಅಧಿಸೂಚನೆಯ ಪ್ರಕಾರ ರಾಜ್ಯದಲ್ಲಿ ಬ್ಯಾಟರಿ ಚಾಲಿತ ಹಾಗೂ ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಸಾರಿಗೆ ವಾಹನಗಳಿಗೆ ರಹದಾರಿ ಪಡೆಯುವುದರಿಂದ ವಿನಾಯಿತಿ ನೀಡಿ ಹೊರಡಿಸಲಾಗಿದ್ದ 20-01-2022ರ ಆದೇಶವನ್ನು ಹಿಂಪಡೆಯಲಾಗಿದೆ. ಅಲ್ಲದೆ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಹೊಸದಾಗಿ ನೋಂದಣಿಯಾಗುವ ಹಾಗೂ ಈಗಾಗಲೇ ನೋಂದಣಿಯಾಗಿ ರಹದಾರಿ ಇಲ್ಲದೆ ಸಂಚರಿಸುತ್ತಿರುವ ಇಂಥ ಎಲ್ಲ ವಾಹನಗಳು “ಶುಲ್ಕರಹಿತವಾಗಿ ರಹದಾರಿ ಪಡೆಯಬೇಕಿದೆ.

ಕರಾವಳಿಯಲ್ಲಿ ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಇಲ್ಲ ಎಂದು ಬೇಕಾಬಿಟ್ಟಿಯಾಗಿ ಆಟೋಗಳು ರಸ್ತೆಗೆ ಇಳಿದಿತ್ತು. ಆಟೋಗಳ ಶೋ ರೂಂ ನವರಿಗೂ ಆಟೋ ಮೂರು ನಾಲ್ಕು ತಿಂಗಳು ಬುಕ್ಕಿಂಗ್ ಮಾಡುವ ಹಂತಕ್ಕೆ ಬಂದಿತ್ತು, ಎಲೆಕ್ಟ್ರಿಕ್ ಆಟೋಗಳಿಗೆ ಪರ್ಮಿಟ್ ಇಲ್ಲದೆ ಸಂಚಾರಕ್ಕೆ ಅವಕಾಶ ಕೊಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು, ಶಾಸಕ ವೇದವ್ಯಾಸ್ ಕಾಮತ್ ಕೂಡ ವಿಧಾನಸಭೆಯಲ್ಲಿ ಈ ಕುರಿತಂತೆ ಕಾನೂನು ತರಲು ಹಲವು ಭಾರೀ ಮನವಿ ಮಾಡಿದ್ದರು.
ಇ- ಆಟೋಗಳು ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿವೆ, ಇದರಿಂದಾಗಿ ನ್ಯಾಯಬದ್ಧವಾಗಿ ಪರ್ಮಿಟ್ ಶುಲ್ಕ ಪಾವತಿಸಿ, ಎಲ್ಲ ನಿಬಂಧನೆಗಳೊಂದಿಗೆ ಆಟೋ ಓಡಿಸುವವರು ನಷ್ಟಕ್ಕೊಳಗಾಗುತ್ತಿದ್ದಾರೆ ಎನ್ನುವುದು ಆಟೋ ಸಂಘಟನೆಗಳ ದೂರಾಗಿತ್ತು. ಇದು ಪದೇ ಪದೆ ಸಾರಿಗೆ ಅಧಿಕಾರಿಗಳ ಮುಂದೆ ಬರುತ್ತಿತ್ತು. ರಾಜ್ಯದಲ್ಲಿ ಅತ್ಯಧಿಕ ದೂರುಗಳು ಮಂಗಳೂರಿನಿಂದಲೇ ಬರುತ್ತಿದ್ದವು, ಹಾಗಾಗಿ ಬ್ಯಾಟರಿ ಚಾಲಿತ ಪರ್ಮಿಟ್ ಇಲ್ಲದ ಇ-ಆಟೋಗಳನ್ನು ನಿಯಂತ್ರಣಕ್ಕೆ ತರಲು ಹೊಸ ನಿಯಮ ಜಾರಿಗೆ ಬರುತ್ತಿದೆ ಎನ್ನುತ್ತಾರೆ. ಪೆಟ್ರೋಲ್, ಡೀಸೆಲ್, ಸಿಎನ್‌ಜಿ ಚಾಲಿತ ಬಾಡಿಗೆ ವಾಹನಗಳಿಗೆ ಐದು ವರ್ಷಕ್ಕೊಮ್ಮೆ ಪರ್ಮಿಟ್ ನವೀಕರಿಸಲಾಗುತ್ತದೆ. ಇದಕ್ಕೆ 600 ರೂ. ಶುಲ್ಕ ತಗಲುತ್ತದೆ. ಇವಿ, ಎಥನಾಲ್ ವಾಹನಗಳಿಗೆ ಈ ಶುಲ್ಕ ಇರದು. ಆದರೆ ಪರ್ಮಿಟ್ ಪಡೆಯಲೇಬೇಕು ಎಂಬುದು ಹೊಸ ನಿಯಮ.