DAKSHINA KANNADA
ಕಾರು ತ್ಯಾಗದಲ್ಲೂ ಪ್ರಚಾರ, ಅಸಲೀಯತ್ ನಲ್ಲಿ ನಡೆದಿರುವುದೇ ಬೇರೆ ವಿಚಾರ
ಕಾರು ತ್ಯಾಗದಲ್ಲೂ ಪ್ರಚಾರ, ಅಸಲೀಯತ್ ನಲ್ಲಿ ನಡೆದಿರುವುದೇ ಬೇರೆ ವಿಚಾರ
ಪುತ್ತೂರು ಮಾರ್ಚ್ 28: ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ ತನ್ನ ಸರಕಾರಿ ಕಾರನ್ನು ಅರ್ಧ ದಾರಿಯಲ್ಲೇ ಬಿಟ್ಟು ಬಸ್ ನಲ್ಲಿ ಸಂಚರಿಸಿದರು ಎನ್ನುವ ಸುದ್ಧಿ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ತನ್ನ ಎಲ್ಲಾ ಕಾರ್ಯಗಳಲ್ಲೂ ಹೇಗೆ ಪ್ರಚಾರ ಪಡೆಯಬಹುದು ಎನ್ನುವುದನ್ನು ಕರಗತ ಮಾಡಿಕೊಂಡಿರುವ ಶಕುಂತಲಾ ಶೆಟ್ಟಿ ಯವರು ಮಾರ್ಚ್ 27 ಅಂದರೆ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾದ ಸಮಯದಲ್ಲೂ ಇದೇ ತಂತ್ರವನ್ನು ಬಳಸಿಕೊಂಡಿದ್ದರು. ಪುತ್ತೂರು ಹೊರವಲಯದಲ್ಲಿ ಶಾಸಕರು ಇದ್ದ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗಿದೆ,ಇದೇ ಸಂದರ್ಭದಲ್ಲಿ ತನ್ನ ಸರಕಾರಿ ಕಾರನ್ನು ತಾನಿದ್ದ ಸ್ಥಳದಲ್ಲೇ ತ್ಯಜಿಸಿ ಬಸ್ ಹತ್ತಿ ಮೂಲಸ್ಥಾನ ಸೇರಿದ್ದಾರೆ ಎನ್ನುವ ಸುದ್ಧಿಯನ್ನು ಶಾಸಕರ ಬೆಂಬಲಿಗರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಆದರೆ ಅಸಲಿಗೆ ಈ ವಿಚಾರ ಸಂಪೂರ್ಣ ಸುಳ್ಳಾಗಿದೆ. ಚುನಾವಣೆ ಘೋಷಣೆಯಾಗುವ ಸಮಯದಲ್ಲಿ ಶಾಸಕರು ಪುತ್ತೂರು ಸಹಾಯಕ ಕಮಿಷನರ್ ಕಛೇರಿಯಲ್ಲಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಅಕ್ರಮ-ಸಕ್ರಮದ ಸಿಟ್ಟಿಂಗ್ ಗೆ ಹಾಜರಾಗಿದ್ದ ಶಾಸಕರು ಚುನಾವಣೆ ಘೋಷಣೆಯಾಯಿತು ಎನ್ನುವ ತಕ್ಷಣ ಕೆಲವು ಅರ್ಜಿಗಳಿಗೆ ಅನುಮತಿ ನೀಡಿ ತನ್ನ ಕಛೇರಿಗೆ ತೆರಳಿದ್ದರು.
ಈ ವಿಚಾರವನ್ನು ಸಹಾಯಕ ಕಮಿಷನರ್ ಕಚೇರಿಯ ಮೂಲಗಳೇ ಸ್ಪಷ್ಟಪಡಿಸಿದೆ. ಚುನಾವಣೆ ಘೋಷಣೆಯಾದ ಬಳಿಕವೇ ಅರ್ಧದಲ್ಲೇ ಶಾಸಕರು ಅಕ್ರಮ-ಸಕ್ರಮ ಸಿಟ್ಟಿಂಗ್ ಮುಕ್ತಾಯಗೊಳಿಸಿದ್ದರು. ಚುನಾವಣೆ ಘೋಷಣೆಯಾಗಿದೆ ಎಂದು ತಿಳಿದ ಬಳಿಕವೂ ಶಾಸಕರು ತನ್ನ ಸರಕಾರಿ ಕಾರನ್ನು ಬಳಸಿಕೊಂಡಿದ್ದರು ಎನ್ನುವುದಕ್ಕೆ ಶಾಸಕರ ಬೆಂಬಲಿಗರು ವೈರಲ್ ಮಾಡಿರುವ ಶಾಸಕರು ಬಸ್ ನಲ್ಲಿ ಕುಳಿತ ಚಿತ್ರವೇ ಸಾಕ್ಷಿಯೂ ಆಗುತ್ತದೆ.
ಪುತ್ತೂರು ಶಾಸಕಿ ಮಹಾನ್ ಕಾನೂನು ಪಾಲಕ ಎಂದು ಫೋಸ್ ಕೊಡಲು ಪ್ರಯತ್ನಿಸಿದ ಶಾಸಕಿ ಬೆಂಬಲಿಗರಿಗೆ ಇದೀಗ ತಾವು ಬಳಸಿದ ಪ್ರಚಾರದ ಸ್ಟ್ರ್ಯಾಟಜಿ ಅವರಿಗೇ ಮುಳುವಾಗುವ ಲಕ್ಷಣ ಕಂಡು ಬರುತ್ತಿದೆ. ಬಸ್ ನಲ್ಲಿ ಇರುವ ಫೋಟೋ ಜೊತೆಗೆ ಕಾರನ್ನೂ ಬೀಳ್ಕೊಡುವ ಚಿತ್ರವನ್ನೂ ಬೆಂಬಲಿಗರು ಹಂಚುತ್ತಿದ್ದರೆ ಸುದ್ಧಿ ಕೊಂಚವಾದರೂ ಪರಿಣಾಮಕಾರಿಯಾಗುತ್ತಿತ್ತು.