Connect with us

BANTWAL

ರಸ್ತೆ ಸಮಸ್ಯೆಯ ಗೋಳು ಕೇಳದ ಜನಪ್ರತಿನಿಧಿಗಳ ವಿರುದ್ದ ಆಕ್ರೋಶ, ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಬಂಟ್ವಾಳ ಡಿಸೆಂಬರ್ 12: 50 ವರ್ಷಗಳಿಂದ ರಸ್ತೆ ಇಲ್ಲದೆ ಸಂಕಷ್ಟದಲ್ಲಿರುವ ಈ ಗ್ರಾಮದ ಜನತೆ ಈ ಬಾರಿ ಗ್ರಾಮಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಸಂದರ್ಭ ಮನವೊಲಿಸಿದ್ದ ಅಧಿಕಾರಿಗಳು ನಂತರ ಇಲ್ಲಿನ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಹಾಗೆ ಬಿಟ್ಟಿದ್ದು, ಈ ಬಾರಿ ಯಾವುದೇ ಕಾರಣಕ್ಕೂ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.


ಸುಮಾರು 10 ಕ್ಕೂ ಅಧಿಕ ಮನೆಗಳಿರುವ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮ ಪಂಚಾಯತ್‌ಗೊಳಪಟ್ಟ ಅಡ್ಯಾಲು ಎಂಬಲ್ಲಿ ಜನರು ಕಳೆದ 50 ವರ್ಷಗಳಿಂದ ನಡೆದಾಡಲೂ ಸರಿಯಾದ ದಾರಿಯಿಲ್ಲದೆ ಪರದಾಡುತ್ತಿದ್ದಾರೆ. ನಮಗೆ ರಸ್ತೆ ಮಾಡಿ ಕೊಡಿ ಎಂದು ಪ್ರಧಾನಿ, ಮುಖ್ಯಮಂತ್ರಿ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಾಕಷ್ಟು ಮನವಿ ಸಲ್ಲಿಸಿದ್ದರೂ ಈ ತನಕ ಯಾವುದೇ ಪರಿಹಾರ ದೊರಕಿಲ್ಲ. ಇದೀಗ ಇಲ್ಲಿನ ಕುಟುಂಬಸ್ಥರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನೋಟಾ ಮತದಾನದ ಮೂಲಕ ಅಭ್ಯರ್ಥಿಗಳ ಪರ ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಮಳೆಗಾಲದಲ್ಲಂತೂ ಇವರ ಸಂಕಷ್ಟ ಹೇಳತೀರದಂತಿದೆ. ಪುತ್ತೂರು ಕಬಕ ರಸ್ತೆಯ ಕವಲು ದಾರಿಯಾದ ಅಡ್ಯಾಲು-ಕುಳ ರಸ್ತೆಯು ಸುಮಾರು 1 ಕೀ.ಮೀ ಉದ್ದವಿದ್ದು ಈ ರಸ್ತೆಯಲ್ಲಿ ಕೊನೆಯ 200 ಮೀ.ನಷ್ಟು ವ್ಯಾಪ್ತಿಯಲ್ಲಿ ರಸ್ತೆಯಿಲ್ಲದೆ ಕಾಲು ದಾರಿಯಾಗಿ ಮಾರ್ಪಟ್ಟಿದೆ. ಇಲ್ಲಿ ಸರಿಯಾದ ವಾಹನ ಸಂಚಾರ ಯೋಗ್ಯವಾದ ರಸ್ತೆ ನಿರ್ಮಾಣ ಮಾಡುವಂತೆ ಕಳೆದ 50 ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಪರಿಣಾಮ ಮಾತ್ರ ಶೂನ್ಯವಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.


ನಮಗೆ ರಸ್ತೆ ಮಾಡಿ ಕೊಡದಿದ್ದಲ್ಲಿ ನಾವು ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಅಡ್ಯಾಲು ಕುಳದ ಎಲ್ಲಾ ಮತದಾರರೂ ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ಬಗ್ಗೆ ಬ್ಯಾನರ್ ಹಾಕಿ ಎಚ್ಚರಿಸುವ ಕೆಲಸವನ್ನು ಮಾಡಿದ್ದರು. ಆದರೆ ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಆಗಿನ ಉಪವಿಭಾಗಾಧಿಕಾರಿಗಳು ರಸ್ತೆ ನಿರ್ಮಾಣದ ಮೌಖಿಕ ಭರವಸೆ ನೀಡಿ ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳುವಂತೆ ಮನವೊಲಿಸಿದ್ದರು. ಅವರ ಭರವಸೆಯ ಮೇರೆಗೆ ಚುನಾವಣಾ ಬಹಿಷ್ಕಾರದಿಂದ ಇಲ್ಲಿನ ಜನ ಹಿಂದೆ ಸರಿದಿದ್ದರು. ಆದರೆ ಉಪವಿಭಾಗಾಧಿಕಾರಿಗಳು ನೀಡಿದ ಭರವಸೆ ವಿಧಾನಸಭೆ ಚುನಾವಣೆ ಕಳೆದು ವರ್ಷಗಳೇ ಸಂದರೂ, ಈ ತನಕ ಇವರ ಬಳಿಗೆ ಬಂದವರಿಲ್ಲ. ಇವರ ಸಮಸ್ಯೆಯನ್ನು ಕೇಳಿದವರಿಲ್ಲ. ಅದಕ್ಕಾಗಿ ಇದೀಗ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾಣ ನಮ್ಮದಾಗಿದೆ ಎನ್ನುವುದು ಇಲ್ಲಿನ ಜನರ ಅಭಿಪ್ರಾಯವಾಗಿದೆ.

ಅಡ್ಯಾಲು-ಕುಳದಲ್ಲಿ ಎಂಡೋಸಲ್ಫಾನ್ ಪೀಡಿತರು, ವಿಕಲಚೇತನರು, ಬುದ್ಧಿಮಾಂಧ್ಯರು, ವೃದ್ಧರು, ಶಾಲಾ ಮಕ್ಕಳು ಹೀಗೆ ಎಲ್ಲಾ ತರದ ಜನರಿದ್ದೂ, ಮಕ್ಕಳಿಗೆ ಶಾಲೆಗೆ ಹೋಗಲು, ಅನಾರೋಗ್ಯ ಆದಾಗ ಆಸ್ಪತ್ರೆಗೆ ಹೋಗಲು ಪರದಾಡಬೇಕಾಗಿದೆ. ಮನೆ, ಇನ್ನಿತರ ಕಟ್ಟಡ ನಿರ್ಮಾಣಕ್ಕಂತೂ ಸಾಧ್ಯವೇ ಇಲ್ಲ. ನಿರ್ಮಾಣದ ಅಗತ್ಯ ಸಾಮಾಗ್ರಿಗಳನ್ನು ಸಾಗಿಸಲು ಆಗದ ಪರಿಸ್ಥಿತಿ ಇದೆ. ಇಲ್ಲಿನ 2 ಮನೆಗಳು ತೀರಾ ನಾದುರಸ್ತಿಯಲ್ಲಿದ್ದು ಬೀಳುವ ಸ್ಥಿತಿಯಲ್ಲಿದೆ. ಒಂದು ಮನೆಯವರು ಕಾಯಕಷ್ಟದಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದರೂ ಕಳೆದ 3 ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ಬಾಕಿಯಾಗಿದೆ. ಅದನ್ನು ಪೂರ್ಣಗೊಳಿಸಬೇಕು ಇಲ್ಲದಿದ್ದಲ್ಲಿ ನಾವು ನೋಟಾ ಮತಚಲಾವಣೆ ನಡೆಸಿ ಅಭ್ಯರ್ಥಿ ಪರ ಮತ ಚಲಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *