KARNATAKA
ಪುಟಾಣಿ ಮಕ್ಕಳ ತಟ್ಟೆಯಿಂದ ಮೊಟ್ಟೆ ಕಸಿದುಕೊಂಡ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸಸ್ಪೆಂಡ್
ಕೊಪ್ಪಳ ಅಗಸ್ಟ್ 10: ಪುಟಾಣಿ ಮಕ್ಕಳ ತಟ್ಟೆಗೆ ಮೊಟ್ಟೆ ಇಟ್ಟು ಇನ್ನೇನು ಅವು ತಿನ್ನಬೇಕು ಅನ್ನುವಷ್ಟರಲ್ಲಿ ಅವರ ಕೈಯಿಂದ ಮೊಟ್ಟೆಯನ್ನು ಕಸಿದುಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೆ ಅಲ್ಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಮಧ್ಯಾಹ್ನದ ಊಟಕ್ಕೆ ಕುಳಿತಿದ್ದ ಮಕ್ಕಳ ತಟ್ಟೆಗೆ ಅಂಗನವಾಡಿ ಸಹಾಯಕಿ ಮೊದಲು ಮೊಟ್ಟೆ ಹಾಕಿದರು. ಮಕ್ಕಳು ಅದನ್ನು ಬಾಯಲ್ಲಿ ಇಟ್ಟುಕೊಳ್ಳುವ ವೇಳೆಗೆ ಅದನ್ನು ಕಸಿದುಕೊಂಡು ತಟ್ಟೆಯಿಂದಲೇ ತೆಗೆದು ಹಾಕಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಮಾತಿದೆ. ಹಾಗೇ ಸರಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲೆಂದು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ನಾನು ಕೂಡ ಅಂಗನವಾಡಿಗಳಲ್ಲಿ ಶಿಸ್ತನ್ನು ತರಲು, ಬದಲಾವಣೆ ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಗುಂಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೇ ಮಕ್ಕಳ ಪ್ಲೇಟ್ ನಲ್ಲಿದ್ದ ಮೊಟ್ಟೆ ಎತ್ತಿಕೊಂಡಿದ್ದಾರೆ. ಮಕ್ಕಳು ತಿನ್ನಲು ಮುಂದಾದ ಮೊಟ್ಟೆ ಕಸಿದುಕೊಂಡಿದ್ದಾರೆ. ವಿಡೀಯೋ ನೋಡಿದರೆ ಕರುಳು ಚುರ್ ಎನ್ನುತ್ತದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಅಮಾನತುಗೊಳಿಸಲಾಗಿದೆ. ಇಬ್ಬರನ್ನೂ ಶಾಶ್ವತವಾಗಿ ವಜಾಗೊಳಿಸಲುಸೂಚಿಸಿದ್ದೇನೆ. ಜೊತೆಗೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.